ಕಮಲಾ ನೇಮಕ ಭಾರತೀಯ ವಲಸಿಗರಿಗೆ ಐತಿಹಾಸಿಕ ಕ್ಷಣ

Update: 2020-08-17 16:43 GMT

ವಾಶಿಂಗ್ಟನ್, ಆ. 17: ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನೇಮಕಗೊಂಡಿರುವುದು ಅಮೆರಿಕದಲ್ಲಿರುವ ಭಾರತೀಯ ವಲಸಿಗರಿಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ಹಿರಿಯ ರಾಜತಾಂತ್ರಿಕರಾಗಿದ್ದ ಭಾರತೀಯ ಅಮೆರಿಕನ್ ನಿಶಾ ದೇಸಾಯಿ ಬಿಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.

‘‘ಇದಕ್ಕಿಂತ ಹೆಚ್ಚಿನ ಹೆಮ್ಮೆಯ ಇನ್ನೊಂದು ಕ್ಷಣವನ್ನು ನಾನು ಹೊಂದಲು ಸಾಧ್ಯವಿಲ್ಲ. ಇದು ನನ್ನ ಪುತ್ರಿಯರು ಹಾಗೂ ದೇಶಾದ್ಯಂತವಿರುವ ಎಲ್ಲ ವಲಸಿಗರ ಮಕ್ಕಳಿಗೂ ಅತ್ಯುನ್ನತ ಕ್ಷಣಗಳಾಗಿವೆ. ನಮ್ಮ ಮಕ್ಕಳು ಎಲ್ಲಿವರೆಗೆ ಹೋಗಬಹುದು ಎನ್ನುವುದಕ್ಕೆ ಕಮಲಾ ಹ್ಯಾರಿಸ್ ಪೂರ್ವನಿದರ್ಶನ ಹಾಕಿಕೊಟ್ಟಿದ್ದಾರೆ’’ ಎಂದು ನಿಶಾ ದೇಸಾಯಿ ಹೇಳಿದರು.

ಅವರು ಬರಾಕ್ ಒಬಾಮ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿದ್ದಾಗ, ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಸಹಾಯಕ ವಿದೇಶ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಈ ಹುದ್ದೆಗೆ ಏರಿರುವ ಮೊದಲ ಭಾರತೀಯ ಅಮೆರಿಕನ್ ಆಗಿದ್ದಾರೆ. ಅವರು ಪ್ರಸಕ್ತ ಯುಎಸ್ ಇಂಡಿಯಾ ಬಿಝ್ನೆಸ್ ಕೌನ್ಸಿಲ್‌ನ ಅಧ್ಯಕ್ಷೆಯಾಗಿದ್ದಾರೆ.

ಭಾರತದ ತಾಯಿ ಮತ್ತು ಜಮೈಕಾದ ತಂದೆಗೆ ಹುಟ್ಟಿರುವ ಕಮಲಾ ಹ್ಯಾರಿಸ್, ಚುನಾವಣೆಯಲ್ಲಿ ಗೆದ್ದರೆ ದೇಶದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News