'ಸಂಗೊಳ್ಳಿ ರಾಯಣ್ಣ' ಪ್ರತಿಮೆ ಸ್ಥಾಪನೆ ವಿವಾದ: ಸೌಹಾರ್ದಯುತವಾಗಿ ಬಗೆಹರಿಸಲು ಸಿದ್ದರಾಮಯ್ಯ ಸೂಚನೆ

Update: 2020-08-17 17:53 GMT

ಬೆಂಗಳೂರು, ಆ. 17: ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ಸ್ಥಾಪಿಸಿದ್ದ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಅಡ್ಡಿ ಮತ್ತು ಕನ್ನಡಪರ ಸಂಘಟನೆಗಳ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಖಂಡಿಸಿ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿ ಸಂಗೊಳ್ಳಿ ರಾಯಣ್ಣ ಸ್ಥಾಪಿಸಲು ಒತ್ತಾಯಿಸಿವೆ.

ಸ್ವಾತಂತ್ರ್ಯೋತ್ಸ ದಿನ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಹುಟ್ಟಿದ ದಿನವೇ ಅವರ ಪ್ರತಿಮೆ ಸ್ಥಾಪನೆಗೆ ಅಡ್ಡಿಪಡಿಸಿದ್ದು ಪುತ್ಥಳಿಯನ್ನು ಪೊಲೀಸರು ತೆರವುಗೊಳಿಸುವ ಮೂಲಕ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳ ಹೋರಾಟಗಾರರು ರಾಜ್ಯ ಸರಕಾರ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಕೂಡಲೇ ರಾಯಣ್ಣರ ಪುತ್ಥಳಿ ಅದೇ ಸ್ಥಳದಲ್ಲಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅನುಮತಿ ಇಲ್ಲದೆ ಪುತ್ಥಳಿ ಸ್ಥಾಪಿಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದು, ಕನ್ನಡಪರ ಸಂಘಟನೆಗಳು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಸರಕಾರದಿಂದ ಅನುಮತಿ ಪಡೆದು ಪ್ರತಿಮೆ ಸ್ಥಾಪಿಸಲು ಮುಂದಾಗಲಾಗಿತ್ತು ಎಂದು ತಿಳಿಸಿದ್ದಾರೆ. ಈ ಮಧ್ಯೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, `ಇಂತಹ ಸಂದರ್ಭದಲ್ಲಿ ಪೊಲೀಸರ ಸಂಯಮದಿಂದ ನಡೆದುಕೊಳ್ಳಬೇಕು' ಎಂದು ನಿರ್ದೇಶನ ನೀಡಿದ್ದಾರೆ.

`ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಕಾನೂನು ಪ್ರಕಾರ ಅನುಮತಿ ಪಡೆದುಕೊಂಡು ರಾಯಣ್ಣನ ಅಭಿಮಾನಿಗಳು ಮೂರ್ತಿ ಸ್ಥಾಪನೆಗೆ ಮುಂದಾಗಬೇಕು' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಂಗೊಳ್ಳಿರಾಯಣ್ಣ ಪ್ರತಿಮೆ ಸ್ಥಾಪನೆಗೆ ಒತ್ತಾಯ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News