ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಜಲ ದಿಗ್ಬಂಧನದಲ್ಲಿ ಬೆಳಗಾವಿಯ ನೂರಾರು ಗ್ರಾಮಸ್ಥರು

Update: 2020-08-18 16:22 GMT

ಬೆಂಗಳೂರು, ಆ. 18: ರಾಜ್ಯ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ನಾಲ್ಕೈದು ಜಿಲ್ಲೆಗಳ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ತಾಯಿ ಮಗು ಸೇರಿದಂತೆ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ನದಿ ಪಾತ್ರದಲ್ಲಿರುವ ನೂರಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಸತತ ನಾಲ್ಕೈದು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಜನರು ಅಕ್ಷರಶಃ ಸಂಕಷ್ಟದಲ್ಲಿದ್ದಾರೆ. ಈ ಮಧ್ಯೆ ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ಮಾರ್ಕೆಂಡೆಯಾ ನದಿಯಿಂದ 25 ಸಾವಿರ ಕ್ಯೂಸೆಕ್ಸ್ ನೀರನ್ನು ಶಿರೂರು ಜಲಾಶಯದಿಂದ ಬಳ್ಳಾರಿ ನಾಲೆ ಮೂಲಕ ಹರಿಯ ಬಿಡುತ್ತಿರುವುದರಿಂದ ಗೋಕಾಕ್ ನಗರ ಸೇರಿದಂತೆ ಹಲವು ಗ್ರಾಮಗಳು ಜಲಾವೃತವಾಗಿವೆ.

ಈ ಮಧ್ಯೆ ಮಲಪ್ರಭ, ಕೋಯ್ನಾ, ಆಲಮಟ್ಟಿ, ಹಿಡ್ಕಲ್, ಹಿರಣ್ಯಕೇಶಿ ಸೇರಿದಂತೆ ವಿವಿಧ ಜಲಾಶಯಗಳ ಒಳಹರಿವು ಹೆಚ್ಚಾಗಿರುವುದರಿಂದ ಅಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಯಬಿಡುತ್ತಿದ್ದು, ಜನರು ಮತ್ತು ನೂರಾರು ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಗೋಕಾಕ್, ಅಥಣಿ, ಕಾಗವಾಡ, ಚಿಕ್ಕೋಡಿ, ರಾಮದುರ್ಗ, ಕುಡಚಿ ಸೇರಿದಂತೆ ಆರೇಳು ತಾಲೂಕುಗಳ ಹಲವು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಜಿಲ್ಲಾಡಳಿತ ಸ್ಥಳಾಂತರಿಸಿದೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿಜಯಪುರ ಜಿಲ್ಲೆಯ ಮುಧೋಳ್ ತಾಲೂಕಿನ ಚಿಚಖಂಡಿ ಸೇತುವೆ, ಯಾದವಾಡ ಸೇತುವೆ ಸೇರಿದಂತೆ ವಿವಿಧ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, `ಪ್ರವಾಹದಿಂದ ಹಾನಿಯಾಗಿರುವ ವಸ್ತುನಿಷ್ಟ ವರದಿಯನ್ನು ಸಂಬಂಧಿಸಿದ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇಲಾಖೆಯ ಮುಖ್ಯಸ್ಥರಿಗೆ ಮಾಹಿತಿ ಸಲ್ಲಿಸಬೇಕು. ಅಧಿಕಾರಿಗಳು 24 ಗಂಟೆ ಅವಧಿ ಜಾಗೃತಿಯಿಂದ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಕ್ಷೇತ್ರದಲ್ಲಿದ್ದು, ತೀವ್ರ ನಿಗಾವಹಿಸಬೇಕು. ಸಂತ್ರಸ್ತರಿಗೆ ಪರಿಹಾರ ಕಾರ್ಯದಲ್ಲಿ ಯಾವುದೇ ನ್ಯೂನತೆಯಾದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ ತಾಲೂಕಿನ ನದಿ ಪಾತ್ರದಲ್ಲಿರುವ ತೋಟದಲ್ಲಿ ವಾಸ ಮಾಡುತ್ತಿರುವ ಜನರು ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಜಾಪೂರ ಜಲಾಶಯದಿಂದ 1.60 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಬಿಡುತ್ತಿರುವುದರಿಂದ ಪ್ರವಾಹ ಪರಿಸ್ಥಿತಿಯ ಆತಂಕ ಸೃಷ್ಟಿಯಾಗಿದೆ. ಚಿಕ್ಕೋಡಿ ತಾಲೂಕಿನ ಹತ್ತಾರು ಗ್ರಾಮಗಳ ಜನರನ್ನು ತಾಲೂಕು ಆಡಳಿತ ಬೋಟ್ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಗೊತ್ತಾಗಿದೆ.

ಯಾವುದೇ ಕಾರಣಕ್ಕೂ ನದಿ ನೀರಿಗೆ ಇಳಿಯಬಾರದು. ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನರು ಸುರಕ್ಷಿತವಾಗಿರಬೇಕು. ಜಾನುವಾರುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಇನ್ನೂ ಆ ನಾಲ್ಕೈದು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ನದಿಪಾತ್ರದ ಜನರು ಜಿಲ್ಲಾ ಮತ್ತು ತಾಲೂಕು ಆಡಳಿತದ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News