ಕೊರೋನ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗದ ಆರೋಪ: ಮಾನವ ಹಕ್ಕುಗಳ ಆಯೋಗಕ್ಕೆ ಎಚ್.ಕೆ.ಪಾಟೀಲ್ ಪತ್ರ

Update: 2020-08-18 17:32 GMT

ಬೆಂಗಳೂರು, ಆ.18: ರಾಜ್ಯದಲ್ಲಿ ಮಹಾಮಾರಿ ಕೊರೋನದಿಂದಾಗಿ ಪ್ರತಿದಿನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈಗ ಪ್ರತಿದಿನ ಸರಾಸರಿ 7000-8000ಕ್ಕೂ ಅಧಿಕ ಜನ ಸೋಂಕಿತರಾಗುತ್ತಿದ್ದು ಪೀಡಿತರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸೇವೆಗಳು ದೊರಕದೆ ಅವ್ಯವಸ್ಥೆಯ ಆಗರವಾಗಿದೆ ಎಂದು ರಾಜ್ಯ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಆ.17ರಂದು ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಕ್ಸಿಜನ್ ಕೊರತೆಯಿಂದ 350ಕ್ಕೂ ಹೆಚ್ಚು ರೋಗಿಗಳನ್ನು ತುರ್ತಾಗಿ ಸ್ಥಳಾಂತರ ಮಾಡಿದ ಘಟನೆ ಈ ಅವ್ಯವಸ್ಥೆಗಳಿಗೆ ಬಹುದೊಡ್ಡ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಪೈಕಿ 45 ರೋಗಿಗಳಂತೂ ಅಕ್ಷರಶಃ ಜೀವನ್ಮರಣದ ಹೋರಾಟ ನಡೆಸಿದರು. ವೈದ್ಯಕೀಯ ಮಹಾವಿದ್ಯಾಲಯವಾಗಿದ್ದರೂ ಅವಶ್ಯಕ ವಸ್ತುಗಳ ಬೇಡಿಕೆ ಮತ್ತು ಪೂರೈಕೆಯನ್ನು ಸಮರ್ಪಕವಾಗಿ ಗಮನಿಸದೇ ಮುಂದಾಲೋಚನೆಯ ಕ್ರಮಗಳಿಲ್ಲದೇ ಬಹುದೊಡ್ಡ ದುರಂತಕ್ಕೆ ಕಾರಣವಾಗಬಹುದಾದ ಘಟನೆ ನಡೆಯಿತು ಎಂದು ಅವರು ಹೇಳಿದ್ದಾರೆ.

ಸೈಕಲ್ ಮೇಲೆ ಪಾರ್ಥಿವ ಶರೀರವೊಂದರ ಅಂತ್ಯಯಾತ್ರೆ ನಡೆದಿದ್ದು ತೀರಾ ಗಂಭೀರವಾದ ಘಟನೆ ನಡೆದಿದೆ. ಕೊರೋನ ವೈರಸ್ ಶಂಕಿತರಿಗಿರುವ ಕಳಂಕ ಭಾವನೆಯಿಂದ ಅಂತಿಮ ಯಾತ್ರೆಗೆ ಯಾರೂ ಬರಲಿಲ್ಲವೆಂದು ತಮ್ಮ ತಂದೆಯ ಶವವನ್ನು ಇಬ್ಬರು ಸಹೋದರರು ಸೈಕಲ್ ಮೇಲೆ ತೆಗೆದುಕೊಂಡು ಹೋಗಿರುವುದು ಅತ್ಯಂತ ಗಂಭೀರವಾದ ಘಟನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರದಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡದೇ ಅಂತಿಮ ಯಾತ್ರೆಗೆ ಈ ರೀತಿ ದುರವಸ್ಥೆಯಾಗಬಾರದೆಂದು ಮಾನವ ಹಕ್ಕುಗಳ ಆಯೋಗ ಆದೇಶ ಮಾಡಿದ್ದರೂ ಬೆಳಗಾವಿಯ ಎಂ.ಕೆ.ಹುಬ್ಬಳ್ಳಿಯಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ಆ.16ರಂದು ನಡೆದಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ಅತ್ಯಂತ ದೊಡ್ಡ ಮತ್ತು ಸೌಲಭ್ಯಗಳನ್ನು ಹೊಂದಿದೆ ಎಂದು ಸರಕಾರದಿಂದ ಘೋಷಣೆ ಮಾಡಲಾದ ಬೆಂಗಳೂರು ಅಂತರ್‍ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಕುಡಿಯುವ ನೀರು ಮತ್ತು ಸ್ವಚ್ಚವಾದ ಶೌಚಾಲಯ ವ್ಯವಸ್ಥೆಗಳಿಲ್ಲ. ಕುಡಿಯುವ ನೀರಿಗಾಗಿಯೂ ಪರದಾಡುವ ಪರಿಸ್ಥಿತಿ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿ ಬೇಕಾಗುವ ಬಿಸಿನೀರಿನ ವ್ಯವಸ್ಥೆ ಇಲ್ಲಿ ಲಭ್ಯವಿಲ್ಲ. ಇಂಥ ದುರವಸ್ಥೆ ಇರುವ ಕೇಂದ್ರದಲ್ಲಿ 4000ಕ್ಕೂ ಹೆಚ್ಚು ಕೊರೋನ ಪೀಡಿತ ಸೋಂಕಿತರನ್ನು ಆರೈಕೆ ಮಾಡಲಾಗುತ್ತಿದೆ. ಸರಕಾರದ ಪರಿಣಾಮಕಾರಿಯಲ್ಲದ ಮತ್ತು ಮೂಲಭೂತ ಸೌಕರ್ಯಗಳ ಕಡೆಗೆ ನಿಷ್ಕಾಳಜಿ ವಹಿಸಿರುವುದರಿಂದ ಈ ಘಟನೆ ಪದೇ ಪದೇ ಮರುಕಳಿಸುತ್ತಿದೆ ಎಂದು ಎಚ್.ಕೆ.ಪಾಟೀಲ್ ದೂರಿದ್ದಾರೆ.

ಈ ಕುರಿತು ಮಾನವ ಹಕ್ಕುಗಳ ಆಯೋಗ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ನಿರ್ದೇಶನ ನೀಡಬೇಕು ಮತ್ತು ರಾಜ್ಯದ ಹೈಕೋರ್ಟ್‍ನಿಂದ ನಿರ್ದೇಶನ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News