ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ನಿಲ್ಲುವುದಿಲ್ಲ- ಬಡಗಲಪುರ ನಾಗೇಂದ್ರ

Update: 2020-08-18 18:14 GMT

ಮೈಸೂರು,ಆ.18: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದು, ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ರಾಜ್ಯದ್ಯಂತ ರೈತ ಸಂಘಟನೆ ದಸಂಸ ಸೇರಿದಂತೆ ಹಲವು ಸಂಘಟನೆಗಳು ಹೋರಾಟ ಮಾಡುತಿದ್ದರೂ ಸರ್ಕಾರ ಸ್ಪಂಧಿಸುತ್ತಿಲ್ಲ. ಸರ್ಕಾರಕ್ಕೆ ಮಾನ ಮಾರ್ಯದೆ ಇಲ್ಲ. ಬಂಡತನದಿಂದ ಪೂರ್ವಯೋಜಿತ ತೀರ್ಮಾನ ಮಾಡಿಕೊಂಡು ತಮಗಿಷ್ಟ ಬಂದ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೊ ಅದೆಲ್ಲವನ್ನು ವಿವಿಧ ಸಂಘಟನೆಗಳ ಜೊತೆಗೂಡಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆ.29 ರಂದು ಮೈಸೂರಿನಲ್ಲಿ ವಿವಿಧ  ಜಿಲ್ಲೆಗಳ ಸುಮಾರು 500ಕ್ಕೂ ಹೆಚ್ಚು ರೈತಮುಖಂಡರು ದಸಂಸ ಕಾರ್ಯಕರ್ತರಿಗೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯ ಬಗ್ಗೆ ವಿಚಾರಗೋಷ್ಠಿ ಮತ್ತು ಸಂವಾದವನ್ನು ಏರ್ಪಡಿಸಲಾಗಿದೆ. ಈ ಮೂಲಕ ರಾಜ್ಯಾದ್ಯಂತ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದರು.

ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಚಳಿಗಾಲದ ಅಧಿವೇಶನ ನಡೆಯುವ ವೇಳೆ ಸುಮಾರು 5 ಲಕ್ಷ ಜನ ಸೇರಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು, ಜೊತೆಗೆ ಸರ್ಕಾರದ ಕುರ್ಚಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಬಿಜೆಪಿ ಸರ್ಕಾರದ ಹಲವು ಶಾಸಕರುಗಳು ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕಾಂಗ್ರೆಸ್, ಜೆಡಿಎಸ್ ಸಹ ವಿರೋಧ ಮಾಡಿ ಹೋರಾಟ ನಡೆಸುತ್ತಿವೆ. ಮುಂದೆ ಎಲ್ಲರನ್ನೊಳಗೊಂಡು ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ದಸಂಸ ಮುಖಂಡ ಬೆಟ್ಟಯ್ಯ ಕೋಟೆ ಮಾತನಾಡಿ, ಈ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡು ಬಾಯಿ ಮಾತ್ರ ಬಿಟ್ಟುಕೊಂಡಿದೆ. ಆಳುವ ಜನಪ್ರತಿನಿಧಿಗಳಿಗೆ ಮಾನ ಮರ್ಯಾದೆ ಇಲ್ಲವಾಗಿದೆ. ಈ ಹಿಂದೆ ಜನಪ್ರತಿನಿಧಿಗಳು ಜನವಿರೋಧಿ ನೀತಿಗಳನ್ನು ಜಾರಿಗೆ ತಂದರೆ ಜನರಿಗೆ ಹೆದರುತ್ತಿದ್ದರು. ಆದರೆ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡರುಗಳಾದ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ಮಂಡ್ಯ ಜಿಲ್ಲೆ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News