ಚಿಕ್ಕಮಗಳೂರು: ದೇವಾಲಯಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಚಿಕ್ಕಮಗಳೂರು, ಆ.19: ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿನ ವಿವಿಧ ದೇವಾಲಯಗಳಿಗೆ ನುಗ್ಗಿ ಚಿನ್ನಾಭರಣ, ಹುಂಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಸೇರಿದಂತೆ ಕೃತ್ಯಕ್ಕೆ ಬಳಿಸಿದ್ದ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಬೂದಿಗೆರೆ ಗ್ರಾಮದ ರಾಜು ಅಲಿಯಾಸ್ ಬೂದಿಗೆರೆ ರಾಜು ಮತ್ತು ಕಡೂರು ತಾಲೂಕಿನ ಮಚ್ಚೇರಿ ಗ್ರಾಮದ ತಮ್ಮಯ್ಯ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 3 ಲಕ್ಷ 90 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣ, 80 ಸಾವಿರ ರೂ.ಮೌಲ್ಯದ ಚಿನ್ನಾಭರಣ, 6500 ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್, ಕಂಚು ಮತ್ತು ಪಂಚಲೋಹದ ದೀಪಗಳು, ಜಮಖಾನ ಮತ್ತಿತರ ಪೂಜಾ ಸಾಮಗ್ರಿಗಳು ಸೇರಿದಂತೆ ಒಟ್ಟು ಸುಮಾರು 5 ಲಕ್ಷ ರೂ. ಮೌಲ್ಯದ ಕಳ್ಳತನ ಮಾಡಲಾಗಿದ್ದ ವಿವಿಧ ದೇವಾಲಯಗಳಿಗೆ ಸೇರಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಹೊಸದುರ್ಗ ಹಾಗೂ ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದು, ರಾತ್ರಿ ವೇಳೆ ದೇವಾಲಯಗಳಿಗೆ ನುಗ್ಗುತ್ತಿದ್ದ ಇವರು ದೇವಾಲಯಗಳ ವಿಗ್ರಹಗಳ ಮೇಲಿದ್ದ ಬೆಳ್ಳಿ, ಚಿನ್ನದ ಆಭರಣಗಳು ಹಾಗೂ ದೇವಾಲಯದ ಹುಂಡಿಗಳನ್ನು ಕಳ್ಳತನ ಮಾಡುತ್ತಿದ್ದರು. ಇತ್ತೀಚೆಗೆ ಕಡೂರು ತಾಲೂಕು ಸಾಣೇಹಳ್ಳಿ ಗ್ರಾಮದ ಕಟ್ಟೆಹೊಳೆ ಚೌಡೇಶ್ವರಿ ದೇವಾಲಯದಲ್ಲಿ ಕಳ್ಳತನ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಈ ಇಬ್ಬರು ಆರೋಪಿಗಳು ಕಡೂರು, ಯಗಟಿ ಹಾಗೂ ಬೀರೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ವಿವಿಧ ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದರೆಂದು ತಿಳಿದು ಬಂದಿದೆ.
ದೇವಾಲಯಗಳ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ಎಸ್ಪಿ ಅಕ್ಷಯ್ ಎಂ.ಎಚ್ ಹಾಗೂ ಎಎಸ್ಪಿ ಶೃತಿ ಅವರು ವಿವಿಧ ಪೊಲೀಸ್ ಠಾಣಾಧಿಕಾರಿಗಳ ನೇತೃತ್ವದ ತಂಡ ರಚಿಸಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರ ತಂಡ ಆ.16ರಂದು ಸಾಣೆಹಳ್ಳಿ ದೇವಾಲಯದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗದು ಬಹುಮಾನವನ್ನು ಘೋಷಿಸಿದ್ದಾರೆಂದು ಇಲಾಖೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.