ರಾಜ್ಯದಲ್ಲ್ಲಿ ಕೃಷಿ ಸ್ಟಾರ್ಟಪ್ ಕಾರ್ಯಾಗಾರ: ಬಿ.ಸಿ.ಪಾಟೀಲ್

Update: 2020-08-19 15:59 GMT

ಬೆಂಗಳೂರು, ಆ.19: ಸ್ಟಾರ್ಟಪ್ ಹಬ್ ಆಗಿ ರೂಪುಗೊಳ್ಳುತ್ತಿರುವ ನಮ್ಮ ರಾಜ್ಯವು ದೇಶದ ಗಮನ ಸೆಳೆಯುತ್ತಿದ್ದು, ಹೊಸ ಸಾಧ್ಯತೆಗಳ ಸವಾಲುಗಳ ಬೆನ್ನತ್ತಿ ಕೃಷಿ ಕ್ಷೇತ್ರವೂ ಮುಂಚೂಣಿಯಲ್ಲಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯ ಹೊಸ ತಲೆಮಾರಿನ ಚಿಂತನೆಗಳಿಗೆ ವೇದಿಕೆಯಾಗಲು ಬೆಂಗಳೂರಿನಲ್ಲಿ ಕೃಷಿ ಸ್ಟಾರ್ಟಪ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಆ.21 ರಂದು ವಿಕಾಸಸೌಧದ ಸಮ್ಮೇಳನ ಸಭಾಂಗಣ ಕೊಠಡಿ ಸಂಖ್ಯೆ 419ರಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ‘ವರ್ಚುವಲ್ ಮೋಡ್ ಆನ್‍ಲೈನ್’ ಮೂಲಕ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಸಾವಯವ ಹಾಗೂ ಸಿರಿಧಾನ್ಯಗಳು, ಆಹಾರ ಸಂಸ್ಕರಣಾ ಉದ್ದಿಮೆಗಳ ವ್ಯಾಪ್ತಿ ಹಾಗೂ ಅವಕಾಶಗಳು, ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿ ಕುರಿತು ಮಾಹಿತಿ ವಿನಿಯಮ, ಚರ್ಚೆ, ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟಪ್‍ನ ಮಹತ್ವ, ರೈತರಿಗಾಗುವ ಲಾಭ ಸೇರಿದಂತೆ ಮತ್ತಿತರ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಹಾಗೂ ದೇಶದ ವಿವಿಧ ಭಾಗಗಳ 100ಕ್ಕೂ ಹೆಚ್ಚು ಕೃಷಿ ಸ್ಟಾರ್ಟಪ್ ಉದ್ದಿಮೆಗಳು, ಹೂಡಿಕೆದಾರರು ಆನ್‍ಲೈನ್ ಮೂಲಕ ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.

ದೇಶದಲ್ಲಿ ಹತ್ತು ವರ್ಷಗಳಿಂದ ವಾರ್ಷಿಕವಾಗಿ ಸುಮಾರು 6 ಬಿಲಿಯನ್ ಡಾಲರ್ ಮೊತ್ತದ ಬಂಡವಾಳವನ್ನು ನವೋದ್ಯಮದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಕೃಷಿ ಮಾರುಕಟ್ಟೆ ಕ್ರಾಂತಿಗೆ ಸ್ಟಾರ್ಟಪ್ ಬಹುಮುಖ್ಯ ವೇದಿಕೆಯಾಗಲಿದ್ದು, ಉತ್ಪಾದನೆ ವೆಚ್ಚಕ್ಕನುಗುಣವಾಗಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಅಧಿಕ ಉತ್ಪಾದನೆಯ ಸಮಸ್ಯೆ ನಿವಾರಣೆಗೆ ಮಾರುಕಟ್ಟೆ ಕ್ರಾಂತಿ ತರಲು ನವೋದ್ಯಮ(ಸ್ಟಾರ್ಟಪ್)ಗಳನ್ನು ಪ್ರೋತ್ಸಾಹಿಸಲು ಈ ಹೆಜ್ಜೆಯಿಡಲಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲು, ಗ್ರಾಹಕರು ನೀಡುವ ಬೆಲೆ ರೈತರಿಗೆ ಸಿಗುವಂತೆ ಮಾಡಲು ಸ್ಟಾರ್ಟಪ್ ಉತ್ತಮ ಸೇತುವೆಯಾಗಲಿದೆ. ಜತೆಗೆ ಜನರೊಂದಿಗೆ ರೈತರಿಗೆ ಸಂಪರ್ಕ ಕಲ್ಪಿಸುವ ವೇದಿಕೆಯೂ ಆಗಲಿದೆ ಎಂದು ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಅಗ್ರಿಟೆಕ್ ಸ್ಟಾರ್ಟಪ್‍ಗಳಿಗೆ 2020ನೇ ಸಾಲಿನಲ್ಲಿ 4.5 ಬಿಲಿಯನ್ ಡಾಲರ್ ಮೊತ್ತದ ಮಾರುಕಟ್ಟೆ ಸೃಷ್ಟಿಯಾಗುವ ನಿರೀಕ್ಷೆಯಿದೆ. ಕಾರ್ಯಾಗಾರದಲ್ಲಿ ಸ್ಟಾರ್ಟಪ್ ಉದ್ದಿಮೆದಾರರ ಜೊತೆ ಚರ್ಚಿಸಿ ಅಭಿವ್ಯಕ್ತವಾಗುವ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಕೃಷಿ ಮಾರುಕಟ್ಟೆ, ರೈತರಿಗೆ ಹಾಗೂ ಕೃಷಿ ಕ್ಷೇತ್ರದಲ್ಲಿ ಅನುಕೂಲ ಕಲ್ಪಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News