ಗಡಿಯಲ್ಲಿ ಸೇನೆಗಾಗಿ ಹೊಸ ಮಾರ್ಗ

Update: 2020-08-19 16:34 GMT

ಹೊಸದಿಲ್ಲಿ,ಜು.21: ಲಡಾಕ್‌ನಲ್ಲಿರುವ ಪಾಕಿಸ್ತಾನ ಹಾಗೂ ಚೀನಾದ ಗಡಿ ಮುಂಚೂಣಿಗೆ ಸೇನಾಪಡೆಗಳನ್ನು ತ್ವರಿತವಾಗಿ ರವಾನಿಸುವ ಪ್ರಯತ್ನವಾಗಿ ಮನಾಲಿಯಿಂದ ಲೇಹ್‌ಗೆ ನೂತನ ರಸ್ತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತ ಶ್ರಮಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ದೌಲತ್‌ಬೇಗ್ ಓಲ್ಡಿ ಸೇರಿದಂತೆ ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಉತ್ತರ ಸಬ್‌ಸೆಕ್ಟರ್ ಮತ್ತಿತರ ಪ್ರದೇಶಗಳಿಗೂ ಪರ್ಯಾಯ ಸಂಪರ್ಕ ಮಾರ್ಗಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಭಾರತವು ಕಾರ್ಯೋನ್ಮುಖವಾಗಿದೆ. ಜಗತ್ತಿನ ಅತಿ ಎತ್ತರದ ಮೋಟಾರುವಾಹನ ಸಂಚಾರ ಯೋಗ್ಯವಾದ ಖಾರ್ದುಂಗ್ ಲಾ ಪಾಸ್‌ನ ಕಾಮಗಾರಿ ಕಾರ್ಯ ಈಗಾಗಲೇ ಆರಂಭಗೊಂಡಿದೆ.

  ಮನಾಲಿಯಿಂದ ಲೇಹ್‌ಗೆ ನಿಮು-ಪಡಂ-ದಾರ್ಚಾ ಆ್ಯಕ್ಸಿಸ್ ಮೂಲಕ ಪರ್ಯಾಯ ಸಂಪರ್ಕ ಮಾರ್ಗವನ್ನು ನಿರ್ಮಿಸಲು ಏಜೆನ್ಸಿಗಳು ಕಾರ್ಯನಿರತವಾಗಿವೆ. ಇದರಿಂದಾಗಿ ಶ್ರೀನಗರದಿಂದ ಜೊಝಿಲಾ ಪಾಸ್‌ಗೆ ಮನಾಲಿಯಿಂದ ಸಾರ್ಚು ಮೂಲಕ ಲೇಹ್‌ಗೆ ತೆರಳಲು ಈಗ ಇರುವ ಮಾರ್ಗಗಳಿಗೆ ಹೋಲಿಸಿದರೆ, ನೂತನವಾಗಿ ನಿರ್ಮಾಣಗೊಳ್ಳಲಿರುವ ರಸ್ತೆಗಳಿಂದ ಬಹಳಷ್ಟು ಸಮಯ ಉಳಿತಾಯವಾಗಲಿದೆ.

ಈವರೆಗೆ ಭಾರತವು ರೆಜಿಲ್ಲಾದಿಂದ ದ್ರಾಸ್-ಕಾರ್ಗಿಲ್ ಅಕ್ಷರೇಖೆ ಮಾರ್ಗವಾಗಿ ಲೇಹ್‌ಗೆ ತೆರಳುವ ರಸ್ತೆಯನ್ನು ಸರಕುಗಳು ಹಾಗೂ ಸೈನಿಕರ ಸಾಗಣೆಗೆ ಬಳಸಿಕೊಳ್ಳುತ್ತಿತ್ತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಇದೇ ಮಾರ್ಗವನ್ನು ಪಾಕಿಸ್ತಾನಿ ಸೈನಿಕರು ಗುರಿಯಿರಿಸಿದ್ದರು. ಈ ರಸ್ತೆಯ ಸಮೀಪವೇ ಚಾಚಿಕೊಂಡಿರುವ ಎತ್ತರದ ಪರ್ವತಗಳ ಮರೆಯಿಂದ ಪಾಕ್ ಸೈನಿಕರು ಭಾರತೀಯ ಯೋಧರ ಮೇಲೆ ಆಗಾಗ್ಗೆ ಗುಂಡು ಹಾಗೂ ಶೆಲ್ ದಾಳಿ ನಡೆಸುತ್ತಿದ್ದಾರೆ.

  ನೂತನ ರಸ್ತೆಯ ಕಾಮಗಾರಿ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ. ನೂತನ ರಸ್ತೆಯು ಮನಾಲಿಯನ್ನು ನೀಮು ಸಮೀಪ ಲೇಹ್‌ನೊಂದಿಗೆ ಸಂಪರ್ಕಿಸಲಿದೆ.

 ಇದೇ ರೀತಿ, ಆಯಕಟ್ಟಿನ ದುರ್ಬುಕ್- ಶ್ಯೊಕ್-ದೌಲತ್ ಬೇಗ್ ಓಲ್ಡಿ (ಡಿಎಸ್‌ಡಿಬಿಓ)ರಸ್ತೆಗೆ ಪರ್ಯಾಯ ಮಾರ್ಗವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿಯೂ ಭಾರತವು ಕಾರ್ಯೋನ್ಮುಖವಾಗಿದೆ. ಬೇಸಿಗೆಯ ಸಮಯದಲ್ಲಿ ಸೇನಾಪಡೆಯ ವಾಹನಗಳು ಪೂರ್ವ ಲಡಾಕ್ ಪ್ರದೇಶಗಳನ್ನು ತಲುಪಲು ಈ ರಸ್ತೆಯನ್ನು ಬಳಸಿಕೊಳ್ಳುತ್ತಿವೆ.

ಡಿಎಸ್‌ಡಿಬಿಓ ರಸ್ತೆಗೆ ಪರ್ಯಾಯ ಮಾರ್ಗವನ್ನು ಕಂಡುಹಿಡಿಯುವ ಹೊಣೆಗಾರಿಕೆಯನ್ನು 14 ಕಾರ್ಪ್ಸ್‌ಗೆ ನೀಡಲಾಗಿದೆ.

ನಾಲ್ಕು ತಾಸು ಉಳಿತಾಯ

   ನೂತನ ರಸ್ತೆಯಿಂದಾಗಿ ಮನಾಲಿಯಿಂದ ಲೇಹ್‌ಗೆ ಪ್ರಯಾಣಿಸುವುದಕ್ಕೆ ಮೂರರಿಂದ ನಾಲ್ಕು ತಾಸುಗಳು ಉಳಿತಾಯವಾಗಲಿವೆ. ಅಷ್ಟೇ ಅಲ್ಲದೆ ಇತರ ಸ್ಥಳಗಳಿಂದ ಲಡಾಕ್ ಪ್ರದೇಶಕ್ಕೆ ಟ್ಯಾಂಕ್‌ಗಳು ಹಾಗೂ ಫಿರಂಗಿ ಗನ್‌ಗಳು ಪಾಕಿಸ್ತಾನ ಅಥವಾ ಇತರ ಎದುರಾಳಿಗಳಿಗೆ ಭಾರತೀಯ ಸೇನೆಯ ಚಲನವಲನದ ಮೇಲೆ ಕಣ್ಗಾವಲಿಡಲು ಸಾಧ್ಯವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News