ರಾಜ್ಯದಲ್ಲಿ ಎರಡು ಸಾವಿರ ಕೋಟಿ ಹೂಡಿಕೆಗೆ ಒಲವು: ಜಗದೀಶ್ ಶೆಟ್ಟರ್

Update: 2020-08-19 16:38 GMT

ಬೆಂಗಳೂರು, ಆ.19: ದೇಶದ ಅತಿದೊಡ್ಡ ಫ್ಲೆಕ್ಸಿಬಲ್ ಪ್ಯಾಕೇಜಿಂಗ್ ಮೆಟೀರಿಯಲ್ ಅಂಡ್ ಫಿಲ್ಮ್ಸ್ ನ ಉತ್ಪಾದಕರಾದ ಯು ಫ್ಲೆಕ್ಸ್ ಗ್ರೂಪ್ ರಾಜ್ಯದಲ್ಲಿ 2 ಹಂತಗಳಲ್ಲಿ 2 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಲು ಒಲವು ತೋರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸಚಿವರನ್ನು ಭೇಟಿಯಾದ ಯು ಫ್ಲೆಕ್ಸ್ ಗ್ರೂಪ್‍ನ ಸಂಸ್ಥಾಪಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಚತುರ್ವೇದಿ ಸಚಿವರೊಂದಿಗೆ ಚರ್ಚಿಸಿದರು. ಬಯೋಡಿಗ್ರೇಡಬಲ್ ಪ್ಯಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ, ರಾಜ್ಯದಲ್ಲಿ ಘಟಕವನ್ನು ಸ್ಥಾಪಿಸಲು ಅಗತ್ಯವಿರುವ ಜಾಗ ಹಾಗೂ ಇನ್ನಿತರೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು. 
ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವರು, ಇದರಿಂದಾಗಿ 2 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ರಾಜ್ಯದಲ್ಲಿ ಹೊಸದಾಗಿ ಜಾರಿಯಾಗಿರುವ ಕೈಗಾರಿಕಾ ನೀತಿ 2020-25ರ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ಕಂಪನಿಯ ಪ್ರತಿನಿಧಿಗಳಿಗೆ ನೀಡಿದರು.

ಇದೇ ವೇಳೆ ಕರ್ನಾಟಕ ರಾಜ್ಯ ಕೈಗಾರಿಕಾ ಸೌಲಭ್ಯ ಅಧಿನಿಯಮದಲ್ಲಿನ ತಿದ್ದುಪಡಿಯಿಂದಾಗಿ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಬಹಳ ಸುಲಭವಾಗಿದೆ. ಏಕಗವಾಕ್ಷಿಯ ಮೂಲಕ ಅನುಮತಿಯನ್ನು ಪಡೆದುಕೊಂಡು ಕೈಗಾರಿಕೆಯನ್ನು ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಬಹುದು ಎಂದು ಹೇಳಿದರು. 

ಕೈಗಾರಿಕಾ ಘಟಕದ ಸ್ಥಾಪನೆಗೆ ಒಟ್ಟಾರೆಯಾಗಿ 55 ಎಕರೆ ಭೂಮಿಯ ಅವಶ್ಯಕತೆ ಇದೆ. ಇನ್ನು 4 ಎಕರೆಗಳನ್ನು ಹೆಚ್ಚಾಗಿ ಮಂಜೂರು ಮಾಡಿದಲ್ಲಿ ಕಾರ್ಮಿಕರಿಗೆ ಬೇಕಾದ ವಸತಿಯ ವ್ಯವಸ್ಥೆಯನ್ನು ಮಾಡಲಿದ್ದೇವೆ. ಶೂನ್ಯ ತ್ಯಾಜ್ಯ ಹಾಗೂ ಪರಿಸರ ಸ್ನೇಹೀ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಇಲ್ಲಿ ನಿರ್ಮಿಸಲಿದ್ದೇವೆ. ಈ ಘಟಕದ ಮೂಲಕ ದೇಶದ ಎಲ್ಲಾ ಭಾಗಗಳಿಗೂ ಉತ್ಪನ್ನಗಳನ್ನು ತಲುಪಿಸಲಿದ್ದೇವೆ ಎಂದು ಯು ಫ್ಲೇಕ್ಸ್ ಗ್ರೂಪ್‍ನ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದರು. 

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಘಟಕ ಸ್ಥಾಪನೆಯ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ ಹಾಗೂ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News