ಚಿತ್ರರಂಗದ ಸಮಸ್ಯೆಗಳಿಗೆ ಏಕಗವಾಕ್ಷಿ ಪರಿಹಾರಕ್ಕೆ ಸಿಎಂ ಜತೆ ಚರ್ಚೆ: ಅಶ್ವತ್ಥ ನಾರಾಯಣ
ಬೆಂಗಳೂರು, ಆ.19: ಕೋವಿಡ್-19ನಿಂದ ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿರುವ ಕನ್ನಡ ಚಿತ್ರರಂಗದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಏಕಗವಾಕ್ಷಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗದ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿತ್ರರಂಗವು ಹಲವು ಇಲಾಖೆಗಳ ಅಡಿಯಲ್ಲಿ ಹರಿದು ಹಂಚಿಹೋಗಿದೆ. ಅವೆಲ್ಲ ಇಲಾಖೆಗಳನ್ನು ಒಂದೆಡೆಗೆ ತಂದು ಸಿಂಗಲ್ ವಿಂಡೋ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದು ವಾಣಿಜ್ಯ ಮಂಡಳಿಯ ಬೇಡಿಕೆಯಾಗಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಇನ್ನೊಂದೆಡೆ ಕನ್ನಡ ಚಿತ್ರರಂಗ ಮತ್ತು ಸರಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದ ವಾಣಿಜ್ಯ ಮಂಡಳಿಗೆ ಚಿತ್ರರಂಗದ ಅಧಿಕೃತ ಸಂಸ್ಥೆ ಎಂಬ ಮಾನ್ಯತೆ ನೀಡಬೇಕು. ಇದೇ ರೀತಿ ಅಸ್ತಿತ್ವಕ್ಕೆ ಬಂದಿರುವ ಇತರ ಸಂಸ್ಥೆಗಳಿಗೆ ಮಾನ್ಯತೆ ನೀಡಬಾರದು ಎಂದು ನಿಯೋಗದ ಸದಸ್ಯರು ಮನವಿ ಮಾಡಿದ್ದಾರೆ. ಆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೊಸ ಚಲನಚಿತ್ರ ನೀತಿ ರೂಪಿಸುವುದು, ಜನತಾ ಥಿಯೇಟರ್ ಸ್ಥಾಪನೆ, ರಾಜ್ಯದ ಪಾಲಿನ ಜಿಎಸ್‍ಟಿಯನ್ನು ನಿರ್ಮಾಪಕರಿಗೇ ಪಾವತಿಸುವುದು, ಎಸ್‍ಒಪಿಯನ್ನು ಸಡಿಲಗೊಳಿಸಿ ಚಿತ್ರೀಕರಣಕ್ಕೆ ಅನುಮತಿ ನೀಡುವುದು, ಏಕಗಾವಕ್ಷಿ ಪದ್ಧತಿ, ಆನ್‍ಲೈನ್ ಪೈರಸಿ ತಡೆಯಲು ಕಠಿಣ ಕ್ರಮ, ಏಕಪರದೆ ಥಿಯೇಟರ್‍ಗಳಿಗೆ ವಿನಾಯಿತಿ, ಕಾರ್ಮಿಕರಿಗೆ ಸಹಾಯಹಸ್ತ, ಚಲನಚಿತ್ರೋದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ಸೇರಿದಂತೆ ಹಲವಾರು ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.
ಇತ್ತೀಚೆಗೆ ಡಾ.ಶಿವರಾಜ್ ಕುಮಾರ್ ಅವರ ನೇತೃತ್ವದಲ್ಲಿ ಬಂದಿದ್ದ ಚಿತ್ರರಂಗದ ಗಣ್ಯರ ಜತೆ ಚರ್ಚೆ ಮಾಡಲಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಹವಾಲು ಸಲ್ಲಿಸುವ ನಿರ್ಧಾರ ಮಾಡಲಾಯಿತು. ಅದರಂತೆ ಆದಷ್ಟು ಬೇಗ ಸಿಎಂ ಅವರ ಜತೆ ಮಾತುಕತೆ ನಡೆಸಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅಶ್ವತ್ಥ ನಾರಾಯಣ ಹೇಳಿದರು.
ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್, ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ನಾಗಣ್ಣ, ವೆಂಕಟರಮಣ, ಕಾರ್ಯದರ್ಶಿಗಳಾದ ಎನ್.ಎಂ. ಸುರೇಶ್, ಗಣೇಶ್, ನರಸಿಂಹಲು, ಖಜಾಂಚಿ ವೆಂಕಟೇಶ್, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಿರ್ಮಾಪಕರಾದ ಎಸ್.ಎ. ಚಿನ್ನೇಗೌಡ, ಕೆ.ಪಿ.ಶ್ರೀಕಾಂತ್, ಕೆ.ಎ. ಮಂಜು, ಜಯಣ್ಣ ಮುಂತಾದವರು ನಿಯೋಗದಲ್ಲಿದ್ದರು.