×
Ad

ಮೈಸೂರು: ನ್ಯಾಯವಾದಿ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ಕೈಬಿಡುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ

Update: 2020-08-20 13:13 IST

ಮೈಸೂರು: ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೇಲಿನ ನ್ಯಾಯಾಂಗ ನಿಂದನೆಯನ್ನು ಕೈಬಿಡುವಂತೆ ಒತ್ತಾಯಿಸಿ ಜನಾಂದೋಲನ ಮಹಾಮೈತ್ರಿ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ನ್ಯಾಯಾಲದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ಗುರುವಾರ ಕಣ್ಣಿಗೆ ಮತ್ತು ಬಾಯಿಗೆ ಕಪ್ಪು ಪಟ್ಟಿಕಟ್ಟಿಕೊಂಡು ಪ್ರಶಾಂತ್ ಭೂಷಣ್ ಅವರ ಬೆಂಬಲಕ್ಕೆ ನಾವಿದ್ದೇವೆ ಎಂಬ ನಾಮ ಫಲಕಗಳನ್ನು ಪ್ರದರ್ಶಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಹಿರಿಯ ಸಾಹಿತಿ ದೇವನೂರು ಮಹಾದೇವ ಸಾರ್ವಜನಿಕ ಹಿತಾಸಕ್ತಿ ನೆಲಕಚ್ಚಿದ್ದು, ಸಾರ್ವಜನಿಕ ಹಿತಾಸಕ್ತಿಯ ಧ್ವನಿಯನ್ನು ದಮನ ಮಾಡಲು ಪ್ರಶಾಂತ್ ಭೂಷಣ್ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬ ನ್ಯಾಯವಾದಿಯಾಗಿ ಪ್ರಶಾಂತ್ ಭೂಷಣ್ ಅವರು ಅವರ ಸರ್ವೀಸ್ ಪೂರ್ತಿ ವಕೀಲಿ ವೃತ್ತಿ ಮಾಡಿರುವುದು ಸಾರ್ವಜನಿಕ ಹಿತಾಸಕ್ತಿ ಕೇಸ್ ಗಳನ್ನೇ ಹೊರತು ಬೇರೆಯದನ್ನಲ್ಲ.  ನ್ಯಾಯಾಲಯ ಕೊಡುವ ತೀರ್ಪನ್ನು ಒಪ್ಪಬೇಕು ಆದರೆ ವಿಮರ್ಶೆ ಮಾಡಬಾರದು ಎಂಬುದಿಲ್ಲ. ಆ ನಿಟ್ಟಿ ನಲ್ಲಿ ಪ್ರಶಾಂತ್ ಭೂಷಣ್ ಅವರು ವ್ಯಕ್ತಿಗತವಾಗಿ ಟ್ವೀಟ್ ಮಾಡಿದ್ದಾರೆ ಹೊರತು ಇಡೀ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಶಾಂತ್ ಭೂಷಣ್ ನ್ಯಾಯಾಂಗದ ಘನತೆಯನ್ನು ಉಳಿಸುವ ಕೆಲಸ ಮಾಡಿದ್ದಾರೆ. ಆದರೆ ಸುಪ್ರೀಂ ಕೋಟ್೯ ಸ್ವಯಂ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಅಳಿಸಿದೆ ಎಂದು ಕಿಡಿಕಾರಿದರು.

ಸುಪ್ರೀಂ ಕೋಟ್೯ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಳ್ಳಬೇಕಾಗಿರುವುದು ದೇಶದ ನಿರುದ್ಯೋಗ ಸಮಸ್ಯೆ ವಿರುದ್ಧ, ಸಂವಿಧಾನದ ಪ್ರತಿ ಸುಟ್ಟು ಹಾಕಿದರಲ್ಲ ಅವರ ವಿರುದ್ಧ. ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತಿದ್ದಾರಲ್ಲ ಅವರ ಮೇಲೆ ಎಂದು ದೇವನೂರು ಮಹಾದೇವ ಹೇಳಿದರು.

ಸಾರ್ವಜನಿಕ ಹಿತಾಸಕ್ತಿ ಆಳುವ ಸರ್ಕಾರ, ಅಧಿಕಾರಿಗಳು ಮತ್ತು ಪತ್ರಿಕಾರಂಗವನ್ನು ಮೀರಿ ಸಾರ್ವಜನಿಕ ಕ್ಷೇತ್ರಕ್ಕೆ ಬಂದು ಬಿದ್ದುಹೋಗಿದ್ದು ಸಾರ್ವಜನಿಕರು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News