ರೈತ, ಕಾರ್ಮಿಕ ವಿರೋಧಿ ಕಾಯ್ದೆ ವಿರುದ್ಧ ನಿರಂತರ ಹೋರಾಟ: ಎಚ್.ಡಿ. ದೇವೇಗೌಡ
ತುಮಕೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಪಾರ್ಲಿಮೆಂಟಿನ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ನಡೆಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶಾಸಕ ಡಿ.ಸತ್ಯನಾರಾಯಣ್ ಶ್ರದ್ಧಾಂಜಲಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾಗಿ, ಆರಂಭದಿಂದಲೂ ರೈತರು, ಕಾರ್ಮಿಕರ ವಿಚಾರದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಮುಂದೆಯೂ ರೈತರ ಪರವಾಗಿ ನಿಲ್ಲಲ್ಲಿದೆ ಎಂದರು.
ರೈತ ವಿರೋಧಿ ಕಾಯ್ದೆಗಳಾಗಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿದೇಯಕ-2020,ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ, 2020 ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕುರಿತಂತೆ ಇನ್ನೊಂದು ರಾಷ್ಟ್ರೀಯ ಪಕ್ಷದ ನಿಲುವು ಎನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಇಂತಹ ಕರಾಳ ಕಾಯ್ದೆಗಳು ಜಾರಿಯಾಗಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ದೇವೇಗೌಡ ಅವರು,ಈ ಮೂರು ಕಾಯ್ದೆಗಳ ತಿದ್ದುಪಡಿಯಿಂದ ಇದರ ಫಲಾನುಭವಿಗಳಾಗಲಿರುವ ರೈತರು, ಕಾರ್ಮಿಕರಿಗೆ ಏನಾದರೂ ಉಪಯೋಗವಿದೆಯೇ ಎಂದು ಬಿಜೆಪಿ ಸರಕಾರವನ್ನು ಪ್ರಶ್ನಿಸಿದ್ದಾರೆ.
ಇತ್ತೀಚಗೆ ನಿಧನರಾದ ಶಾಸಕ ಡಿ.ಸತ್ಯನಾರಾಯಣ ಪಕ್ಷ ನಿಷ್ಠೆಗೆ ಇರುವ ಮತ್ತೊಂದು ಹೆಸರು, ಎಂದಿಗೂ ತಾನು ನಂಬಿರುವ ತತ್ವ ಸಿದ್ಧಾಂತ ಗಳಿಗೆ ದ್ರೋಹ ಬಗೆಯದ ಸೈದ್ಧಾಂತಿಕ ನಿಲುವಿನ ವ್ಯಕ್ತ. ಇಂತಹ ಇಳಿ ವಯಸ್ಸಿನಲ್ಲಿಯೂ ನಾನು ಈ ಸಭೆಯಲ್ಲಿ ಭಾಗವಹಿಸಿರುವುದು ಸತ್ಯ ನಾರಾಯಣ ಅವರ ವ್ಯಕ್ತಿತ್ವಕ್ಕೆ ಗೌರವ ನೀಡಿ ಎಂದು ಅತೀವ ದುಖಃ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಡಿ.ಸಿ. ಗೌರಿಶಂಕರ್, ಜೆಡಿಎಸ್ ಪಕ್ಷವನ್ನು ರೈತರು, ಕಾರ್ಮಿಕರು, ಬಡವರಿಂದ ಕಟ್ಟಿ ಬೆಳೆಸಿರುವ ಎಚ್.ಡಿ.ದೇವೇಗೌಡರು, ರೈತರು ಸಂಕಷ್ಟದಲ್ಲಿರುವಾಗ ತಮ್ಮ ವಯಸ್ಸನ್ನು ಲಕ್ಕಿಸದೆ ಹೋರಾಟಕ್ಕೆ ಇಳಿದಿದ್ದಾರೆ. ಅವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪ್ರತಿಭಟನೆಯಲ್ಲಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಎಂ.ಟಿ .ಕೃಷ್ಣಪ್ಪ, ಎಚ್.ನಿಂಗಪ್ಪ, ಸುಧಾಕರಲಾಲ್, ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜೀ ನಪ್ಪ, ಉಪಾಧ್ಯಕ್ಷ ಟಿ.ಆರ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ,ಮುಖಂಡರಾದ ಎ.ಗೋವಿಂದರಾಜು, ಬೆಳ್ಳಿಲೋಕೇಶ್, ಸೋಲಾರ್ ಕೃಷ್ಣಮೂರ್ತಿ, ಮಹಿಳಾ ಘಟಕದ ತಾಹೀರಾ ಬೇಗಂ ಸೇರಿದಂತೆ ಇತರರು ಭಾಗವಹಿಸಿದ್ದರು.
ಈ ಸಂಬಂಧ ಮನವಿ ಪತ್ರವನ್ನು ಜಿಲ್ಲಾಧಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.