×
Ad

ಕೊರೋನ ಸೋಂಕಿತರಿಗೆ 'ಆಕ್ಸಿಜನ್' ಕೊರತೆ: ಆಡಳಿತ-ವಿಪಕ್ಷಗಳ ಮಧ್ಯೆ ಜಟಾಪಟಿ

Update: 2020-08-20 17:13 IST

ಬೆಂಗಳೂರು, ಆ. 20: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತರ ಚಿಕಿತ್ಸೆಗೆ `ಆಕ್ಸಿಜನ್ ಕೊರತೆ' ವಿಚಾರ ಇದೀಗ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ಜಟಾಪಟಿ, ವಾಗ್ವಾದಕ್ಕೆ ಕಾರಣವಾಗಿದೆ. `ನಮ್ಮ ಸರಕಾರ ಸಮರ್ಥವಿದೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸಮರ್ಥಿಸಿದ್ದರೆ, `ಆಮ್ಲಜನಕ ಪೂರೈಸುವಲ್ಲಿ ಸರಕಾರ ಏದುಸಿರು ಬಿಡುತ್ತದೆ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, `ಸರಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಲ್ಲಿ ಏದುಸಿರು ಬಿಡುತ್ತಿರುವ ರಾಜ್ಯ ಸರಕಾರ ರಾಜ್ಯದ ರೈತರಿಗೆ ರಸಗೊಬ್ಬರ, ವಿಶೇಷವಾಗಿ ಯೂರಿಯಾ, ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಗೊಬ್ಬರ ಸಿಗದ ರೈತರು ಹಿಡಿಶಾಪ ಹಾಕುವ ಮೊದಲು ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

`ವಾಡಿಕೆಗಿಂತ ಈ ಬಾರಿ ರಾಜ್ಯದಾದ್ಯಂತ ಶೇ.25ರಷ್ಟು ಹೆಚ್ಚು ಬಿತ್ತನೆ ಆಗಿದೆ. ಕೃಷಿ ಇಲಾಖೆ ಇದನ್ನು ಅಂದಾಜಿಸುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಬಾಯಿಮಾತಿನ ಅನುಕಂಪಕ್ಕಿಂತ ರಸಗೊಬ್ಬರ ಪೂರೈಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಗೊಬ್ಬರ ಕೊರತೆಯಿಂದ ಬಿತ್ತನೆ ಕಾರ್ಯ ನಿಲ್ಲಿಸದಂತೆ ತುರ್ತು ಸೂಕ್ತ ವ್ಯವಸ್ಥೆ ಮಾಡಬೇಕು' ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರೇ, ಸರಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಸುವಲ್ಲಿ ನಮ್ಮ ಸರಕಾರ ಸಮರ್ಥವಿದೆ. ಈಗಾಗಲೇ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಯೂರಿಯಾ ಗೊಬ್ಬರ ಪೂರೈಸುವಲ್ಲಿ ಸಶಕ್ತವಾಗಿದೆ. ಆಡಿದ ಮಾತು, ಬಿಟ್ಟ ಬಾಣ, ಕಳೆದ ಸಮಯ ಮತ್ತು ಕೈತಪ್ಪಿ ಹೋದ ಅವಕಾಶ ಇವು ಎಂದಿಗೂ ಮರಳಿ ಬಾರವು'

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News