'ಆದರ್ಶ ಆಡಳಿತಗಾರ ಅರಸು' ಅವರ ಜಯಂತಿ: ಸಿಎಂ ಸೇರಿ ಗಣ್ಯರ ಶುಭ ಹಾರೈಕೆ
ಬೆಂಗಳೂರು, ಆ. 20: `ಆದರ್ಶ ಆಡಳಿತಗಾರರಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಜಾರಿಗೆ ತಂದ ಅನೇಕ ಸುಧಾರಣಾ ಕ್ರಮಗಳನ್ನು ಕನ್ನಡ ನಾಡು ಸದಾ ಸ್ಮರಿಸುತ್ತದೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವು ಗಣ್ಯರು ದೇವರಾಜ ಅರಸು ಅವರ 105ನೆ ಜಯಂತಿ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸಿದ್ದಾರೆ.
ತೀರ್ಮಾನ ಹಿಂಪಡೆಯಿರಿ: `ಮುಖ್ಯಮಂತ್ರಿ ಯಡಿಯೂರಪ್ಪನವರೇ ದೇವರಾಜ ಅರಸು ಅವರ ಮೇಲೆ ನಿಮಗೆ ಒಂದಿಷ್ಟಾದರೂ ಗೌರವ ಇದ್ದರೆ ಮೊದಲು ಅವರು ಜಾರಿಗೆ ತಂದಿದ್ದ `ಉಳುವವನೇ ಭೂ ಒಡೆಯನನ್ನಾಗಿ ಮಾಡುವ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಉಳ್ಳವನಿಗೆ ಭೂಮಿ ನೀಡಲು ಹೊರಟಿರುವ ನಿಮ್ಮ ತೀರ್ಮಾನವನ್ನು ಹಿಂದಕ್ಕೆ ಪಡೆಯಿರಿ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
'ಎರಡು ವರ್ಷಗಳಿಂದ ಪ್ರತಿಷ್ಠಿತ `ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡದೆ ನಾಡಿನ ಹೆಮ್ಮೆಯ ನಾಯಕನಿಗೆ ಅಗೌರವ ತೋರಿದ ಬಿಜೆಪಿ ಸರಕಾರದ ನಡೆ ಖಂಡನೀಯ. ಅರಸು ಅವರಿಗೆ ಅಗೌರವ ತೋರಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಯಾವ ನೈತಿಕ ಹಕ್ಕಿದೆ' ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಟ್ವಿಟ್ಟರ್ ಮೂಲಕ ಖಾರವಾಗಿ ಪ್ರಶ್ನಿಸಿದ್ದಾರೆ.
ಶೋಷಿತರಿಗೆ ಆಸರೆ: `ಕರ್ನಾಟಕ ನಾಮಕರಣ, ಹಾವನೂರು ಕಮಿಷನ್, ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಹಾಗೂ ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನದ ಸಂದರ್ಭದಲ್ಲಿ ವಿನಮ್ರವಾಗಿ ಸ್ಮರಿಸಿಕೊಳ್ಳುತ್ತೇನೆ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಮರಿಸಿದ್ದಾರೆ.
'ತಮಗೆ ದಕ್ಕಿದ ರಾಜಕೀಯ ಪರಮಾಧಿಕಾರವನ್ನು ತಳಸಮುದಾಯದ ಅಭಿವೃದ್ಧಿಗೆ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ ಅರಸು ಅವರ ಕಾರ್ಯ ವೈಖರಿ ಅನುಕರಣೀಯ. ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಭರದಲ್ಲಿ ಇತರ ಸಮುದಾಯಗಳ ಮೇಲೆ ಸವಾರಿ ಮಾಡದ ರಾಜಕೀಯ ಸೂಕ್ಷ್ಮಪ್ರಜ್ಞೆ ಅರಸು ಅವರಲ್ಲಿ ನಾನು ಕಂಡಿದ್ದೇನೆ. ಸಾಮಾಜಿಕ, ಆರ್ಥಿಕ ಸುಧಾರಣೆಗಳ ಹರಿಕಾರ ಅರಸು ಸದಾ ಸ್ಮರಣೀಯರು' ಎಂದು ಕುಮಾರಸ್ವಾಮಿ ನೆನಪು ಮಾಡಿಕೊಂಡಿದ್ದಾರೆ.
'ಋಣಮುಕ್ತ, ಭೂ ಸುಧಾರಣಾ ಕಾಯ್ದೆಗಳ ಮೂಲಕ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ಪೂರ್ಣ ನಮನಗಳು. ಸಮಾಜದ ಶೋಷಿತ ವರ್ಗಗಳಿಗೆ ಸ್ಥಾನಮಾನ ಕಲ್ಪಿಸಿದ ಈ ಮಹಾನ್ ಮುತ್ಸದ್ಧಿಯ ಬದುಕು ನಮಗೆಲ್ಲಾ ಮಾದರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವಿಟ್ಟರ್ ಮೂಲಕ ಬಣ್ಣಿಸಿದ್ದಾರೆ.
'ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಮೂಲಕ ಸಮಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಹೋದ ಪರಿವರ್ತನೆ ಹರಿಕಾರ ದೇವರಾಜ ಅರಸು ಅವರಿಗೆ, ಸಾಮಾಜಿಕ ನ್ಯಾಯದ ಬಂಡಿಯನ್ನು ಮುನ್ನಡೆಸುವ ಕಾಯಕಕ್ಕೆ ಕೈಜೋಡಿಸುವ ಮೂಲಕ ನಾವೆಲ್ಲ ಹುಟ್ಟುಹಬ್ಬದ ಶುಭ ಕೋರೋಣ, ಗೌರವ ಅರ್ಪಿಸೋಣ'
-ಸಿದ್ದರಾಮಯ್ಯ, ವಿಪಕ್ಷ ನಾಯಕ