ಆಕ್ಸಿಜನ್ ಕೊರತೆ ನೀಗಿಸಿ ಜನರನ್ನು ಗಂಡಾಂತರದಿಂದ ಪಾರು ಮಾಡಿ: ಬಿಎಸ್‌ವೈಗೆ ಎಚ್.ಕೆ.ಪಾಟೀಲ್ ಪತ್ರ

Update: 2020-08-20 12:01 GMT

ಬೆಂಗಳೂರು, ಆ. 20: `ಕೊರೋನ ಪೀಡಿತರಿಗೆ ಆಕ್ಸಿಜನ್ ಅವಶ್ಯಕತೆ ಹೆಚ್ಚಾಗುತ್ತಿದೆ. ಆಕ್ಸಿಜನ್ ಕೊರತೆ ನೀಗಿಸಲು ಇಂಡಸ್ಟ್ರಿಯಲ್ ಆಕ್ಸಿಜನ್ ಅನ್ನೂ ಬಳಕೆ ಮಾಡಲು ತುರ್ತು ಕ್ರಮ ಕೈಗೊಳ್ಳಿ. ಆಕ್ಸಿಜನ್ ಸರಬರಾಜು ಕುರಿತಂತೆ ದೃಢವಾದ ಹೆಜ್ಜೆಗಳನ್ನಿಡಿ. ಗಂಡಾಂತರದಿಂದ ಜನರನ್ನು ಪಾರು ಮಾಡಿ' ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಕೊರೋನ ಮಹಾಮಾರಿ ದಿನೇ ದಿನೇ ಹೆಚ್ಚು ವ್ಯಾಪಕವಾಗುತ್ತಿದೆ. ತನ್ನ ಲಕ್ಷಣ ಪರಿಣಾಮಗಳನ್ನು ಬದಲಾಯಿಸುತ್ತಿದೆ. ಒಂದು ಅಂದಾಜಿನಂತೆ ರಾಜ್ಯದಲ್ಲಿ ಸಾವಿನ ಪ್ರಮಾಣ ಜೂನ್/ಜುಲೈ ಹಾಗೂ ಆಗಸ್ಟ್ 15ರ ವರೆಗಿನ ದಿನಗಳನ್ನು ಗಮನಿಸಿದಾಗ ಜೂನ್‍ಗಿಂತ 2-3 ಪಟ್ಟು ಜಾಸ್ತಿಯಾಗಿದೆ. ಸರಕಾರಿ ಅಂಕಿ-ಅಂಶಗಳ ಪ್ರಕಾರ ಸಾವಿನ ಪ್ರಮಾಣ ಶೇ.1.5ರಷ್ಟಿದ್ದದ್ದು ಶೇ.3ಕ್ಕೆ ಏರಿಕೆಯಾಗಿರುವುದು ಭಯಾನಕ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳಿಂದ ಈ ರೋಗದಿಂದ ಬಳಲುವವರಿಗೆ ಆಕ್ಸಿಜನ್ ಅವಶ್ಯಕತೆ ಏರಿಕೆಯಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ ಮಾಡಿಕೊಂಡಿಲ್ಲ. ಈಗ ತರಾತುರಿ ನಡೆದಿದೆ. ಆಕ್ಸಿಜನ್ ಸಿಲಿಂಡರ್ ಗಳ ಪೂರೈಕೆ ಆಗುತ್ತಿಲ್ಲ. ಲಿಕ್ವಿಡ್ ಆಕ್ಸಿಜನ್ ಸಮರ್ಪಕವಾಗಿ ಪೂರೈಸುತ್ತಿಲ್ಲ. ಕಾರಣಗಳನ್ನು ತಿಳಿಯಬೇಕು, ಸಮಸ್ಯೆ ಬಗೆಹರಿಯಬೇಕು. ತಮಿಳುನಾಡಿನಿಂದ ಬರುತ್ತಿದ್ದ ಲಿಕ್ವಿಡ್ ಆಕ್ಸಿಜನ್ ಹಾಗೂ ಗ್ಯಾಸ್ ಸಿಲಿಂಡರ್ ಗಳು ಅವರ ರಾಜ್ಯದಲ್ಲಿ ನೀಡಿ ಹೆಚ್ಚಾದರೆ ಮಾತ್ರ ಕರ್ನಾಟಕಕ್ಕೆ ಎಂಬ ನಿಲುವು ತಮಿಳುನಾಡು ತೆಗೆದುಕೊಂಡಿದೆ. ಇದರಿಂದ ಬಾರೀ ಪ್ರಮಾಣದ ಸಮಸ್ಯೆ ಸೃಷ್ಟಿಯಾಗಿದೆ. ಮಹಾರಾಷ್ಟ್ರದಿಂದ ಸದ್ಯ ಈಗ ಸಮಸ್ಯೆ ಇಲ್ಲ. ಬರುವ ದಿನಗಳಲ್ಲಿಯ ಪರಿಸ್ಥಿತಿ ಕುರಿತು ಮುಂದಾಲೋಚನೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಇಂಡಸ್ಟ್ರಿಯಲ್ ಆಕ್ಸಿಜನ್ ಬಳಕೆಗೆ ಅವಕಾಶ ಸರಕಾರ ಮಾಡಿಕೊಡಬೇಕು. ಆ ವ್ಯವಸ್ಥೆ ಮಾರ್ಪಡಿಸಿದರೆ ಸಮಸ್ಯೆ ಬಗೆಹರಿದೀತು. ಮತ್ತೊಂದು ಸಲಹೆ ಕೆಲ ಕಾರ್ಖಾನೆಗಳು ತಮ್ಮ ಕಾರ್ಖಾನೆಯ ಬಳಕೆಗಾಗಿ ಮಾತ್ರ ಮೀಸಲಿಟ್ಟುಕೊಂಡಿವೆ. ಅದು ಕೇವಲ ಕಾರ್ಖಾನೆಯ ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತಿವೆ. ಅವುಗಳನ್ನು ತಕ್ಷಣ ಕೊರೋನ ಪೀಡಿತರಿಗೆ ಆ ಉತ್ಪಾದನೆ ಸಂಪೂರ್ಣವಾಗಿ ನೀಡಲು ಆದೇಶಿಸಬೇಕು. ಈ ಕುರಿತು ಗಂಭೀರ ಮತ್ತು ದೃಢವಾದ ಹೆಜ್ಜೆಗಳನ್ನಿಡದೇ ಹೋದರೆ ಜನ ಆಸ್ಪತ್ರೆಗಳಲ್ಲಿ ಬಾರೀ ಸಂಖ್ಯೆಯಲ್ಲಿ ಸಾವಿಗೀಡಾಗಬೇಕಾದ ಪ್ರಸಂಗ ಬಂದೀತು ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News