ಕೊರೋನ ಯೋಧರ ಒತ್ತಡ ನಿವಾರಣೆಗೆ ರಜೆ ನೀಡಲು ಕ್ರಮ: ಸಚಿವ ಡಾ.ಸುಧಾಕರ್

Update: 2020-08-20 13:10 GMT

ಬೆಂಗಳೂರು, ಆ. 20: `ರಾಜ್ಯದ ಎಲ್ಲ ಭಾಗದ ವೈದ್ಯರುಗಳಿಗೆ, ಕೊರೋನ ಯೋಧರಿಗೆ ನೈತಿಕ ಸ್ಫೂರ್ತಿಯನ್ನು ಮುಂದಿನ ದಿನಗಳಲ್ಲಿ ನಿಮ್ಮ ಒತ್ತಡಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ನಿಮಗೆ ರಜೆ, ಒತ್ತಡ ಸಡಿಲ ಮಾಡಲು ಎಲ್ಲ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕೋವಿಡ್ ನಿಯಂತ್ರಿಸುವಲ್ಲಿ ಬಿಡುವಿಲ್ಲದೇ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಎಲ್ಲ ಕೋವಿಡ್ ವಾರಿಯರ್ಸ್ ಗಳಿಗೆ ನಾನು ಈ ಮೂಲಕ ತಿಳಿಸುವುದೇನಂದರೆ ಅಧಿಕ ಕೆಲಸದಿಂದ ನೀವು ಒತ್ತಡ, ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವು ನಮ್ಮ ಸರಕಾರದ ಗಮನಕ್ಕೆ ಬಂದಿದೆ. ಸರಕಾರದ ಪರವಾಗಿ ಮೇಲ್ಕಂಡ ಭರವಸೆ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

'ಯಾರೂ ನಾಗೇಂದ್ರ ಅವರ ಸಾವನ್ನು ಅನ್ಯ ಕಾರಣಗಳಿಗೆ ದುರ್ಬಳಕೆ ಮಾಡಬಾರದು ಎಂದು ಕಳಕಳಿಯ ಮನವಿ ಮಾಡುತ್ತಿದ್ದೇನೆ. ಈಗಾಗಲೇ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ. ಕೋವಿಡ್ ಯೋಧರ ನೆರವಿಗೆ ನಮ್ಮ ಸರಕಾರ ಜೊತೆಗಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮತ್ತಷ್ಟು ಸೂಕ್ತ ಕ್ರಮಗಳು ಕೈಗೊಳ್ಳಲಾಗುವುದು' ಎಂದು ಸುಧಾಕರ್ ತಿಳಿಸಿದ್ದಾರೆ.

`ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಪ್ರಾಣವನ್ನು ಹಿಂದಿರುಗಿ ತರಲು ಸಾಧ್ಯವಿಲ್ಲವೆಂದು ಗೊತ್ತಿದೆ. ಆದರೆ, ಅವರ ಕುಟುಂಬದ ಸದಸ್ಯರಿಗೆ ಶಾಶ್ವತವಾದ ಪರಿಹಾರವನ್ನು ಸರಕಾರ ಖಂಡಿತವಾಗಿಯೂ ಮಾಡುತ್ತದೆ. ಎಲ್ಲ ಕೋವಿಡ್ ಯೋಧರ ಜೊತೆ ಸರಕಾರ ಇದೆ ಎಂದು ಹೇಳಲು ಇಚ್ಛಿಸುತ್ತೇನೆ. ನಾಗೇಂದ್ರ ಅವರ ಸಾವಿನಲ್ಲಿ ಗೊಂದಲ ಸೃಷ್ಟಿಮಾಡುವುದು ಅಮಾನವೀಯವಾಗುತ್ತದೆ. ವೈದ್ಯಕೀಯ ಸಂಘದ ಎಲ್ಲ ಆತ್ಮೀಯರಿಗೆ ಮನವಿ ಮಾಡುವುದೇನೆಂದರೆ ನಾಗೇಂದ್ರ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಆದ್ಯತೆ ಕೊಡಿ. ಅವರ ಕುಟುಂಬ ವರ್ಗದವರಿಗೆ ಸಿಎಂ ಬಿಎಸ್‍ವೈ ಜೊತೆ ಚರ್ಚೆಸಿ ನ್ಯಾಯ ಕೊಡಿಸುತ್ತೇವೆ' ಎಂದು ಸುಧಾಕರ್ ಇದೇ ವೇಳೆ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News