ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಆ.24ಕ್ಕೆ ವಿಚಾರ ಸಂಕಿರಣ: ವೈಎಸ್‍ವಿ ದತ್ತ

Update: 2020-08-20 13:26 GMT

ಚಿಕ್ಕಮಗಳೂರು, ಆ.20: ರಾಜ್ಯದ ಇತಿಹಾಸದಲ್ಲಿ ಇದುವರೆಗೂ ಚಾಲ್ತಿಯಲ್ಲಿದ್ದ ಭೂ ಸುಧಾರಣಾ ಕಾಯ್ದೆ ಸೇರಿದಂತೆ ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳು ಕ್ರಾಂತಿಕಾರಿ, ಜನಪರ ಕಾಯ್ದೆಗಳಾಗಿದ್ದವು. ಆದರೆ ಇಂತಹ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವ ರಾಜ್ಯ ಸರಕಾರದ ನಿಲುವು ರೈತರು, ಕಾರ್ಮಿಕರು ಹಾಗೂ ಬಡ ಸಾಗುವಳಿದಾರರ ವಿರೋಧಿಯಾಗಿದ್ದು, ಜನಪರ ಕಾಯ್ದೆಗಳಿಗೆ ಮಾಡಲಾಗಿರುವ ತಿದ್ದುಪಡಿಗಳನ್ನು ರದ್ದು ಪಡಿಸಲು ಆಗ್ರಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮಾಜಿ ಶಾಸಕ, ಜೆಡಿಎಸ್ ಹಿರಿಯ ಮುಖಂಡ ವೈಎಸ್‍ವಿ ದತ್ತ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ರಾಜ್ಯ ಹಾಗೂ ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರಗಳು ಜನವಿರೋಧಿ ಆಡಳಿತದಿಂದಾಗಿ ರೈತರು, ಕಾರ್ಮಿಕರೂ ಸೇರಿದಂತೆ ಜನಸಾಮಾನ್ಯರ ಬದುಕು ಅತಂತ್ರವಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ ಜನಪರವೂ, ಕ್ರಾಂತಿಕಾರಿಯೂ ಆಗಿದ್ದ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ವಾಮಮಾರ್ಗದ ಮೂಲಕ ತಿದ್ದುಪಡಿ ಮಾಡಿದೆ. ಈ ಕಾಯ್ದೆಗಳ ಬಗ್ಗೆ ಯಾವುದೇ ಸಭೆ, ಚರ್ಚೆ ನಡೆಸದೇ ಕೊರೋನ ಲಾಕ್‍ಡೌನ್ ಸಂದರ್ಭ ತೆರೆಮರೆಯಲ್ಲಿ ಸುಗ್ರೀವಾಜ್ಞೆ ಮೂಲಕ ಮಾಡಿರುವ ಈ ತಿದ್ದುಪಡಿಗಳ ಹಿಂದೆ ಕಾರ್ಪೋರೆಟ್ ಸಂಸ್ಥೆಗಳ ಹಿತಕಾಯುವ ಉದ್ದೇಶ ಸರಕಾರದ್ದಾಗಿದೆ. ಸರಕಾರದ ಈ ಸಂಚಿನ ವಿರುದ್ಧ ಜನಜಾಗೃತಿ ಮೂಡಿಸುವ ಹಾಗೂ ತಿದ್ದುಪಡಿ ರದ್ದು ಮಾಡಲು ಆಗ್ರಹಿಸುವ ಉದ್ದೇಶದಿಂದ ಆ.24ರಂದು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜನಜಾಗೃತಿ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದಾರೆ ಎಂದು ವೈಎಸ್‍ವಿ ದತ್ತ ಮಾಹಿತಿ ನೀಡಿದರು.

ರಾಜ್ಯ ರಾಜಕಾರಣದ ಇತಿಹಾಸಲ್ಲಿ ಜನಪರ ಕಾಯ್ದೆಗಳಿಗೆ ಸಾರ್ವಜನಿಕ ಅಭಿಪ್ರಾಯ, ಸಂವಾದ, ಚರ್ಚೆ ನಡೆಸದೇ ಸುಗ್ರೀವಾಜ್ಞೆ ಅಸ್ತ್ರ ಬಳಸಿ ತಿದ್ದುಪಡಿ ಮಾಡಿರುವ ನಿದರ್ಶನವೇ ಇಲ್ಲ. ಆದರೆ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇಂತಹ ಜನಪರ ಕಾಯ್ದೆಗಳ ಬಗ್ಗೆ ಸಂವಾದ, ಚರ್ಚೆ, ರೈತರ ಅಭಿಪ್ರಾಯ ಕೇಳದೇ ಸರ್ವಾಧಿಕಾರಿ ಶಕ್ತಿ ಬಳಸಿಕೊಂಡು ತಿದ್ದುಪಡಿ ಮಾಡಿದೆ. ಅಲ್ಲದೇ ಈ ತಿದ್ದುಪಡಿಗಳನ್ನು ಮಾಡಲು ಕೊರೋನ ಸೋಂಕಿನ ಸಂದಿಗ್ಧ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಕೊರೋನ ಲಾಕ್‍ಡೌನ್ ಕಾಲದಲ್ಲಿ ಜನರ ಧ್ವನಿಯನ್ನು ಹತ್ತಿಕ್ಕಿ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದು ರಾಜ್ಯ ರಾಜಕಾರಣದ ಇತಿಹಾಸದಲ್ಲಿ ವಿಚಿತ್ರ ಪ್ರಕರಣವಾಗಿದೆ ಎಂದರು.

ಭೂ ಸುಧಾರಣಾ ಕಾಯ್ದೆಯನ್ನು ಹಿಂದೆ ಸಿಎಂ ಆಗಿದ್ದ ದೇವರಾಜ ಅರಸು ಜಾರಿ ಮಾಡಿದ ಜನಪರವೂ, ಕ್ರಾಂತಿಕಾರಿಯೂ ಆದ ಕಾಯ್ದೆಯಾಗಿದೆ. ಈ ಕಾಯ್ದೆ ಜಾರಿ ವೇಳೆ ಎಚ್.ಡಿ.ದೇವೇಗೌಡ ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ ದೇವೇಗೌಡ ಅವರು ಇದೊಂದು ಜನಪರ, ರೈತಪರ, ಬಡವರ ಪರನಾದ ಕಾಯ್ದೆಯಿಂದ ಸ್ವಾಗತಿಸಿದ್ದರು. ಇಂತಹ ಜನಪರ ಕಾಯ್ದೆಯಿಂದಾಗಿ ರಾಜ್ಯಾದ್ಯಂತ ಕೂಲಿ ಕೆಲಸ ಮಾಡಿಕೊಂಡಿದ್ದವರೂ ಭೂ ಮಾಲಕರಾಗುವಂತಾಯಿತು. ಇಂತಹ ಕಾಯ್ದೆಗೆ ಬಿಜೆಪಿ ಸರಕಾರ ವಿರೋಧ ಪಕ್ಷ, ರೈತರು, ಪ್ರಗತಿಪರರ ವಿರೋಧ ಇದ್ದಾಗ್ಯೂ ಸುಗ್ರೀವಾಜ್ಞೆ ಹೊರಡಿಸಿ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯಿಂದಾಗಿ ಕೃಷಿಕರಲ್ಲದವರೂ ನೂರಾರು ಜಮೀನು ಹೊಂದುವಂತಾಗುತ್ತದೆ. ಶ್ರೀಮಂತ ಉದ್ಯಮಿಗಳು, ಕಾರ್ಪೋರೆಟ್ ಸಂಸ್ಥೆಗಳು ಬಡ ರೈತರ ಜಮೀನುಗಳನ್ನು ಕೊಂಡು ಭೂ ಮಾಲಕರಾಗಿ ರೈತರು ಅವರ ಗುಲಾಮರಾಗುವಂತಹ ವ್ಯವಸ್ಥೆಗೆ ಬಿಜೆಪಿ ಸರಕಾರ ನಾಂದಿ ಹಾಡಿದೆ ಎಂದು ದತ್ತ ಆರೋಪಿಸಿದರು.

ಭೂ ಸುಧಾರಣೆ ಕಾಯ್ದೆಯಂತೆ ಸದ್ಯ ಜಾರಿಯಲಿದ್ದ ಕಾರ್ಮಿಕ ಕಾಯ್ದೆಗಳು ಕಾರ್ಮಿಕರ ಹಿತರಕ್ಷಣೆ ಮಾಡುವ ಕಾಯ್ದೆಗಳಾಗಿದ್ದವು. ಇಂತಹ ಕಾಯ್ದೆಗೂ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲಾಗಿದ್ದು, ಕಾರ್ಮಿಕರ ದುಡಿಮೆಯ ಅವಧಿ 8ರಿಂದ 12 ಗಂಟೆಗೆ ಏರಿಕೆಯಾಗಲಿದ್ದು, ಸಂಬಳದಲ್ಲೂ ಕಡಿತವಾಗಲಿದ್ದು, ಈ ತಿದ್ದುಪಡಿ ಹಿಂದೆ ಕಾರ್ಮಿಕರಿರುವ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂದ ಅವರು, ಕೇಂದ್ರದ ಮೋದಿ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಸೂಟುಬೂಟಿನ ಕಾರ್ಪೋರೆಟ್ ಗಿರಾಕಿಗಳು ಇನ್ನು ಮುಂದೆ ರೈತರ ಜಮೀನುಗಳಿಗೆ ನೇರವಾಗಿ ನುಗ್ಗಲು ಸರ್ವ ಸ್ವತಂತ್ರ ಸಿಕ್ಕಿದಂತಾಗಿದೆ. ಎಪಿಎಂಸಿ ಮಂಡಳಿಯ ಅಧಿಕಾರ, ಆದಾಯವನ್ನೂ ಕಿತ್ತುಕೊಳ್ಳಲಾಗಿದ್ದು, ರೈತರ ಕತ್ತು ಹಿಸುಕುವ ತಿದ್ದುಪಡಿಯನ್ನು ಜಾರಿ ಮಾಡಲಾಗಿದೆ ಎಂದು ಟೀಕಿಸಿದರು.

ಬಿಜೆಪಿ ಸರಕಾರದ ಈ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ತೀರ್ಮಾನದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜನಜಾಗೃತಿ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಅದರಂತೆ ಆ.24ರಂದು ಸೋಮವಾರ ಚಿಕ್ಕಮಗಳೂರು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರೇ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದ ಅವರು, ಇದು ಜೆಡಿಎಸ್ ಕಾರ್ಯಕ್ರಮವಾಗಿದ್ದರೂ ಸಮಾನ ಮನಸ್ಕ ಪಕ್ಷಗಳು, ಸಂಘ ಸಂಸ್ಥೆಗಳು, ಪ್ರಗತಿಪರ ಸಂಘಟನೆಗಳನ್ನೂ ಭಾಗವಹಿಸುವಂತೆ ಕೋರಲಾಗುವುದು. ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಜಿಲ್ಲೆಯಲ್ಲಿನ ಅತಿವೃಷ್ಟಿ ಹಾನಿ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ದೇವೇಗೌಡ ಚರ್ಚಿಸಲಿದ್ದಾರೆ. ನಂತರ ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿ ಪ್ರದೇಶಗಳಿಗೆ ದೇವೇಗೌಡ ಭೇಟಿ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ, ವಿಪ ಸದಸ್ಯ ಭೋಜೇಗೌಡ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಜಿಲ್ಲಾಧ್ಯಕ್ಷ ರಂಜನ್ ಅಜಿತ್, ಮುಖಂಡ ಚಂದ್ರಪ್ಪ ಉಪಸ್ಥಿತರಿದ್ದರು.

ಜನಪರ, ಸಮಾಜಮುಖಿ ಕಾನೂನು ಜಾರಿಗೆ ಸುಗ್ರೀವಾಜ್ಞೆ ಮೂಲಕ ಅಸ್ತಿತ್ವದಲ್ಲಿರುವ ಕಾಯ್ದೆಗಳಿಗೆ ತಿದ್ದುಪಡಿತರಲು ಸಂವಿಧಾನವೇ ಅವಕಾಶ ಕಲ್ಪಿಸಿದೆ. ಆದರೆ ಇಂತಹ ತಿದ್ದುಪಡಿ ವೇಳೆ ಜನ, ಜನಪ್ರತಿನಿಧಿಗಳೊಂದಿಗೆ ಸಂವಾದ ಅಗತ್ಯವಾಗಿದೆ. ಆದರೆ ಬಿಜೆಪಿ ಸರಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಲಾಕ್‍ಡೌನ್ ಅವಧಿಯಲ್ಲಿ ಜನತೆಯ ಧ್ವನಿ ಹತ್ತಿಕ್ಕಿ ಹಿಂಬಾಗಿಲ ಮೂಲಕ ತಿದ್ದುಪಡಿ ಮಾಡಿರುವುದರ ಹಿಂದೆ ಕಾರ್ಪೋರೆಟ್ ಶಕ್ತಿಗಳ ಹಿತ ಕಾಯುವ ಹುನ್ನಾರ ಅಡಗಿದೆ. ಹಿಂದೆ ದೇವೇಗೌಡ, ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲೂ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಆದರೆ ಸರಕಾರ ನೀಡಿದ ಜಮೀನಿನನ್ನು ಉದ್ದೇಶಿತ ಉದ್ದಿಮೆಗಳ ಸ್ಥಾಪನೆಗೆ ಬಳಸದೇ, ಜನರಿಗೆ ಉದ್ಯೋಗ ನೀಡದಿದ್ದಲ್ಲಿ ಅಂತಹ ಭೂಮಿಯನ್ನು ಸರಕಾರ ಹಿಂಪಡೆಯಲು ಅವಕಾಶ ಇತ್ತು. ಆದರೆ ಬಿಜೆಪಿ ಸರಕಾರ ಮಾಡಿರುವ ತಿದ್ದುಪಡಿಯಿಂದಾಗಿ ಉದ್ಯಮಿಗಳು ತಾವು ಖರೀದಿಸಿದ ಭೂಮಿಯನ್ನು ಉದ್ದೇಶಿತ ಯೋಜನೆಗಳಿಗೆ ಬಳಕೆ ಮಾಡಲಾಗದಿದ್ದಲ್ಲಿ ಅದನ್ನು ಬೇರೆ ಉದ್ಯಮಿಗಳಿಗೆ ಮಾರಾಟ ಮಾಡಲು ಅವಕಾಶ ನೀಡಿದೆ. ಇಂತಹ ತಿದ್ದುಪಡಿಯನ್ನು ಒಪ್ಪಲು ಸಾಧ್ಯವೇ ಇಲ್ಲ. ಸರಕಾರ ಈ ತಿದ್ದುಪಡಿ ಮೂಲಕ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ನೀಡುತ್ತಿದೆ. 
- ಭೋಜೇಗೌಡ , ವಿಧಾನ ಪರಿಷತ್ ಸದಸ್ಯ

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ಮಲೆನಾಡು ಭಾಗದ ಅಡಿಕೆ, ಕಾಳುಮೆಣಸು, ಏಲಕ್ಕಿ, ಕಾಫಿ ಬೆಳೆಗಾರರು ಭಾರೀ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಎಪಿಎಂಸಿ ಸೆಸ್ ಅನ್ನು 35 ಪೈಸೆಗೆ ಇಳಿಕೆ ಮಾಡಿರುವುದರಿಂದ ಎಪಿಎಂಸಿಗಳನ್ನು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಿಂದೆ ಶೇ.1ರಷ್ಟು ಸೆಸ್ ಇದ್ದಾಗ ಎಪಿಎಂಸಿಗಳಲ್ಲಿ 6 ಲಕ್ಷ ಕೋ. ರೂ. ವಹಿವಾಟು ನಡೆಯುತ್ತಿತ್ತು. 35 ಪೈಸೆ ಸೆಸ್ ವಿಧಿಸಿರುವುದರಿಂದ ರಾಜ್ಯದ ಎಪಿಎಂಸಿಗಳು ನಿಷ್ಟ್ರೀಯವಾಗಲಿವೆ.
- ಬಿ.ಬಿ.ನಿಂಗಯ್ಯ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News