×
Ad

ಕೊರೋನ ಯೋಧ, ನಂಜನಗೂಡು ಆರೋಗ್ಯಾಧಿಕಾರಿ ಆತ್ಮಹತ್ಯೆ: ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ

Update: 2020-08-20 20:13 IST

ಮೈಸೂರು, ಆ.20: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಆರೋಗ್ಯಾಧಿಕಾರಿ ಡಾ. ನಾಗೇಂದ್ರ (43) ಅವರು ಗುರುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೋವಿಡ್-19 ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಜಿ.ಪಂ. ಸಿಇಓ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನನ್ನನ್ನು ಪ್ರಭಾರ ಆರೋಗ್ಯಾಧಿಕಾರಿ ಹುದ್ದೆಯಿಂದ ಮುಕ್ತಿಗೊಳಿಸಿ ಎಂದು ಹಲವು ಬಾರಿ ಡಿಎಚ್‍ಓ ಅವರಿಗೆ ಪತ್ರ ಬರೆದಿದ್ದರು ಎನ್ನಲಾಗಿದ್ದು, ಒತ್ತಡದಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂದು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.

ಈ ನಡುವೆ ನಂಜನಗೂಡು ಆರೋಗ್ಯಾಧಿಕಾರಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಜರಬಾದ್‍ನಲ್ಲಿರುವ ಡಿಎಚ್‍ಒ ಕಚೇರಿ ಆವರಣದಲ್ಲಿ ಡಾ. ನಾಗೇಂದ್ರ ಅವರ ಮೃತದೇಹವನ್ನು ಇರಿಸಿ ಪ್ರತಿಭಟನೆ ನಡೆಸಿದ ನೂರಾರು ವೈದ್ಯಕೀಯ ಸಿಬ್ಬಂದಿ, ಕರ್ತವ್ಯದಲ್ಲಿನ ಒತ್ತಡ ಹಾಗೂ ಕಿರುಕುಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರು ಆತ್ಮಹತ್ಯೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಮೈಸೂರಿನ ನಂಜನಗೂಡು ತಾಲೂಕಿನ ಕೋವಿಡ್ ವಾರಿಯರ್, ಆರೋಗ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯಿತು. ಅವರ ಸಾವು ನನಗೆ ಅತ್ಯಂತ ಬೇಸರ ತಂದಿದೆ. ಪ್ರೀತಿಯ ಕೊರೋನ ವಾರಿಯರ್ಸ್ ಗಳಿಗೆ ನನ್ನದೊಂದು ಮನವಿ. ನಿಮಗೆ ಎಷ್ಟೇ ಒತ್ತಡಗಳಿದ್ದರೂ ನಿಮ್ಮ ಮೇಲಾಧಿಕಾರಿಗಳ ಜೊತೆ ಹೇಳಿಕೊಳ್ಳಿ. ನಿಮ್ಮ ಕಷ್ಟಗಳಿಗೆ ಸರ್ಕಾರ ಯಾವತ್ತೂ ಜೊತೆಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

30 ಲಕ್ಷ ರೂ. ಪರಿಹಾರ ಘೋಷಣೆ: ಈ ಸಂಬಂಧ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಂಜನಗೂಡು ಆರೋಗ್ಯಾಧಿಕಾರಿ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಕೊರೋನ ವಾರಿಯರ್ ಡಾ.ನಾಗೇಂದ್ರ ಅವರ ಸಾವಿನ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು 30 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪರಿಹಾರ ನೀಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News