×
Ad

ಮೈಸೂರು: ಹಂದಿ ಬೇಟೆಗೆ ಮಾಂಸದ ಜೊತೆ ಇಟ್ಟಿದ್ದ ನಾಡ ಬಾಂಬ್‍ಗೆ ಸಾಕು ನಾಯಿ ಬಲಿ

Update: 2020-08-20 22:01 IST

ಮೈಸೂರು,ಆ.20: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದ ಜಮೀನಿನಲ್ಲಿ ನಾಡಬಾಂಬ್‍ಗೆ ಸಾಕು ನಾಯಿ ಬಲಿಯಾಗಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟೈಗರ್ ಬ್ಲಾಕ್ ಗ್ರಾಮದ ರೈತ ಆರ್ಮುಗಂ ಅವರ ಜಮೀನಿನಲ್ಲೆ ಅವರ ಸಾಕು ನಾಯಿ ನಾಡ ಬಾಂಬ್‍ಗೆ ಬಲಿಯಾಗಿದೆ. ಹಂದಿಗಳ ಬೇಟೆಗಾಗಿ ಅಡಿಕೆ ಕಾಯಿ ಗಾತ್ರದ ನಾಡ ಬಾಂಬ್ ತಯಾರಿಸಿ ಕೋಳಿ ಮಾಂಸದ ಜೊತೆಗೆ ಹಂದಿಗಳ ಓಡಾಟ ಇರುವ ಕಡೆಗಳಲ್ಲಿ ರೈತರ ಜಮೀನುಗಳಲ್ಲಿಯೇ ಇಡುತ್ತಾರೆ. ಹಾಗಾಗಿ ಸಾಕು ನಾಯಿ ಸೇರಿದಂತೆ ಅನೇಕ ಪ್ರಾಣಿಗಳು ಸಾಯುತ್ತವೆ ಎಂದು ಆರ್ಮುಗಂ ಅರೋಪಿಸಿದ್ದಾರೆ.

ಗ್ರಾಮದಲ್ಲಿ ಭೇಟೆಗಾರರ ತಂಡವಿದ್ದು, ರೈತರ ಜಮೀನು ಮತ್ತು ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಕಾರ್ಯಚರಿಸುತ್ತಿದೆ. ಕೋಳಿಯ ಮಾಂಸದೊಂದಿಗೆ ಸಿಡಿಮದ್ದನ್ನು ಅಡಗಿಸಿಟ್ಟು, ಕಾಡು ಹಂದಿಯನ್ನು ಭೇಟೆಯಾಡುತ್ತಾರೆ. ಬೇಟೆಗಾರರ ಹಾವಳಿ ಅಧಿಕವಾಗಿದ್ದು, ಇವರು ಅಡಗಿಸಿಟ್ಟ ಸಿಡಿಮದ್ದನ್ನು ತಿನ್ನಲು ಹೋದ ನಾಯಿ ಸತ್ತಿದೆ. ಮನುಷ್ಯರು ಏನಾದರು ಇದನ್ನು ತುಳಿದಿದ್ದರೂ ಸಹ ಅಪಾಯವಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ಸಂಬಂಧ ಎಚ್.ಡಿ.ಕೋಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ನೀಡಲಾಗಿದ್ದು, ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು ಎಂದು ರೈತ ಆರ್ಮುಗಂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News