×
Ad

ಮಂಡ್ಯ: ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2020-08-20 23:20 IST

ಮಂಡ್ಯ, ಆ.20: ಕರ್ನಾಟಕ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ದೇವರಾಜು ಅರಸು, ರಾಜೀವ್ ಗಾಂಧಿ ಜನ್ಮದಿನಾಚರಣೆ ನಂತರ ಸಮಾವೇಶಗೊಂಡ ಪಕ್ಷದ ಮುಖಂಡರು, ಕಾರ್ಯಕರ್ತರು, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಡಿ.ದೇವರಾಜು ಅರಸು ಅವರ ಜಾರಿಗೆ ತಂದ ಕ್ರಾಂತಿಕಾರಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ರಾಜ್ಯ ಸರಕಾರ ತಿದ್ದುಪಡಿ ತರುವ ಮೂಲಕ ರೈತರ ಬದುಕನ್ನು ನಾಶ ಮಾಡಲು ಹೊರಟಿದೆ ಎಂದು ಅವರು ಕಿಡಿಕಾರಿದರು.

ಯಾರೂ ಬೇಕಾದರೂ ಮಿತಿಇಲ್ಲದೆ ಭೂಮಿಯನ್ನು ಖರೀದಿಸುವ ತಿದ್ದುಪಡಿಯು ರೈತರ ಭೂಮಿಯನ್ನು ಕಾರ್ಪೋರೇಟ್ ಕುಳಗಳಿಗೆ ಸುಲಭವಾಗಿ ದೊರಕಲು ಸರಕಾರ ಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ, ಕಾರ್ಮಿಕ, ಬಡ ಜನರ ವಿರೋಧಿಯಾಗಿದ್ದು, ಉಳ್ಳವರ, ಕಾರ್ಪೋರೇಟ್‍ಗಳ ಪರವಾಗಿ ನೀತಿಗಳನ್ನು ಜಾರಿ ಮಾಡುತ್ತಿವೆ ಎಂದು ಅವರು ದೂರಿದರು.

ಕೂಡಲೇ ರಾಜ್ಯ ಸರಕಾರ ಭೂ ಸುಧಾರಣಾ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ, ರದ್ರಪ್ಪ, ಸಿದ್ದರಾಮೇಗೌಡ, ವಿಜಯಲಕ್ಷ್ಮಿ, ಸಿ.ಎಂ.ದ್ಯಾವಪ್ಪ, ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News