ದೇಶದಲ್ಲಿ 20 ದಿನದಲ್ಲಿ 12 ಲಕ್ಷ ಕೊರೋನ ಪ್ರಕರಣ; ವಿಶ್ವದಲ್ಲೇ ಅತ್ಯಧಿಕ

Update: 2020-08-21 03:57 GMT

ಹೊಸದಿಲ್ಲಿ, ಆ.21: ದೇಶದಲ್ಲಿ ಆಗಸ್ಟ್ ತಿಂಗಳ ಮೊದಲ 20 ದಿನಗಳಲ್ಲಿ 12 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ವಿಶ್ವದಲ್ಲೇ ಅತ್ಯಧಿಕ. ಗುರುವಾರ ದೇಶದಲ್ಲಿ 69 ಸಾವಿರಕ್ಕೂ ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಇದು ಎರಡನೇ ಗರಿಷ್ಠ ಸಂಖ್ಯೆಯಾಗಿದೆ. ಒಂದೇ ದಿನ 986 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯಗಳಿಂದ ಕಲೆ ಹಾಕಿದ ಅಂಕಿ ಅಂಶಗಳ ಪ್ರಕಾರ, ಆಗಸ್ಟ್ 20ರವರೆಗೆ ಭಾರತದ ಕೋವಿಡ್-19 ಪ್ರಕರಣಗಳ ಸಂಖ್ಯೆ 12,07,539 ಆಗಿದೆ. ಜುಲೈನಲ್ಲಿ ಭಾರತದಲ್ಲಿ 11,09,444 ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್‌ನಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳು ವಿಶ್ವದಲ್ಲೇ ಅತ್ಯಧಿಕವಾಗಿದ್ದು, ಎರಡನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ 9,94,863 ಹಾಗೂ ಮೂರನೇ ಸ್ಥಾನದಲ್ಲಿರುವ ಬ್ರೆಝಿಲ್‌ನಲ್ಲಿ 7,94,115 ಪ್ರಕರಣಗಳು ವರದಿಯಾಗಿವೆ ಎಂದು ವರ್ಲ್ಡ್‌ಮೀಟರ್.ಇನ್ಫೋ ಹೇಳಿದೆ.

ಗುರುವಾರ ಭಾರತದಲ್ಲಿ 69,317 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಸಂಖ್ಯೆ 29 ಲಕ್ಷದ ಗಡಿ ದಾಟಿದೆ. ಬುಧವಾರ 70,101 ಪ್ರಕರಣಗಳು ವರದಿಯಾದದ್ದು ಇದುವರೆಗಿನ ದಾಖಲೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 14,492 ಪ್ರಕರಣಗಳು ಗುರುವಾರ ದಾಖಲಾಗಿದ್ದು, ಮೊದಲ ಬಾರಿಗೆ ಒಂದೇ ದಿನ 14 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರ ಹೊರತುಪಡಿಸಿ ಪಶ್ಚಿಮ ಬಂಗಾಳ (3,197), ಪಂಜಾಬ್ (1,741), ಗುಜರಾತ್ (1,175), ಮಧ್ಯಪ್ರದೇಶ (1,142), ಛತ್ತೀಸ್‌ಗಢ (1,016), ಹರ್ಯಾಣ (996), ಪುದುಚೇರಿ (554) ಹಾಗೂ ಮೇಘಾಲಯ (126) ಇದುವರೆಗಿನ ಗರಿಷ್ಠ ಪ್ರಕರಣಗಳನ್ನು ಗುರುವಾರ ದಾಖಲಿಸಿವೆ. ಮಹಾರಾಷ್ಟ್ರದಲ್ಲಿ 14,400 ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6,43,289ಕ್ಕೇರಿದ್ದು, ಆಗಸ್ಟ್‌ನ 20 ದಿನಗಳ ಪೈಕಿ 14 ದಿನಗಳಲ್ಲಿ 10 ಸಾವಿರಕ್ಕಿಂತ ಅಧಿಕ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ.

ಆಂಧ್ರದಲ್ಲಿ ಗುರುವಾರ 95 ಮಂದಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 3,001ಕ್ಕೇರಿದೆ. 9,393 ಪ್ರಕರಣಗಳು ಹೊಸದಾಗಿ ಸೇರ್ಪಡೆಯಾಗಿದ್ದು, ಒಟ್ಟು ಪ್ರಕರಣಗ ಸಂರ್ಖಯೆ 3,25,396 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News