ನಿಮಗೆ ನಾಚಿಕೆ ಆಗಬೇಕು, ನಿಮ್ಮ ಪರಿಹಾರ ಬೇಡ: ಸಚಿವ ಸುಧಾಕರ್‌ಗೆ ವೈದ್ಯೆ ತರಾಟೆ
ಮೈಸೂರು,ಆ.21: ಗುರುವಾರ ನಂಜನಗೂಡು ತಾಲೂಕಿನ ಪ್ರಭಾರ ತಾಲೂಕು ವೈದ್ಯಾಧಿಕಾರಿ ಡಾ.ಎಸ್‌ಆರ್.ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಮಹಿಳಾ ವೈದ್ಯಾಧಿಕಾರಿಯೊಬ್ಬರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಡಾ.ನಾಗೇಂದ್ರ ಅವರ ಪಾರ್ಥೀವ ಶರೀರವನ್ನು ಗುರುವಾರ ಮೈಸೂರು ನಗರದ ನಝರ್‌ಬಾದ್ ನಲ್ಲಿರುವ ಡಿ.ಎಚ್‌ಒ ಕಚೇರಿ ಎದುರು ಇಟ್ಟು ಕುಟುಂಬಸ್ಥರು ಮತ್ತು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಂತಿಮ ದರ್ಶನ ಪಡೆಯಲು ಬಂದ ಸಚಿವ ಡಾ.ಸುಧಾಕರ್ ಅವರನ್ನು ಮಹಿಳಾ ವೈದ್ಯಾಧಿಕಾರಿ ಕಲಾವತಿ ಎಂಬವರು, ‘‘ಅನ್ಯಾಯವಾಗಿ ನಾಗೇಂದ್ರನನ್ನು ಸಾಯಿಸಿ ಬಿಟ್ಟರಲ್ಲ, ನಮಗೆ ನಿಮ್ಮ ಹಣ ಬೇಡ, ನಾಗೇಂದ್ರ ಬೇಕು, ತಂದು ಕೊಡಿ’’ ಎಂದು ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ‘‘ನಿಮಗೆ ನಮಸ್ಕಾರ, ನಿಮ್ಮ ಯೋಗ್ಯತೆ ಗೊತ್ತಾಯಿತು. ನಮಗೆ ನಿಮ್ಮ ಸರಕಾರ ಬೇಕಿಲ್ಲ, ನಮಗೆ ನಾಗೇಂದ್ರ ಬೇಕು, ನಿಮಗೆ ಕೊಡಿಸೋದಕ್ಕೆ ಆದರೆ ಕೊಡಿಸಿ ಇಲ್ಲಾಂದ್ರೆ ಇಲ್ಲಿಂದ ತೊಲಗಿ, ಬ್ರೇಕಿಂಗ್ ನ್ಯೂಸ್ ಹಾಕ್ತೀರ ಹಾಕಿ, 30 ಲಕ್ಷ ರೂ. ಪರಿಹಾರ ನೀಡುತ್ತೀರ? ನಾವು ವೈದ್ಯರು ನಮ್ಮ ಒಂದು ತಿಂಗಳ ಸಂಬಳ ಕೊಟ್ಟರೆ ಹತ್ತು ಕೋಟಿ ರೂ. ಆಗುತ್ತೆ. ನಾಚಿಕೆ ಆಗಲ್ವ ನಿಮಗೆ, ನಾಚಿಕೆ ಇಲ್ಲದೆ ಇಲ್ಲಿತನಕ ಬಂದಿದ್ದೀರಾ’’ ಎಂದು ಏರು ಧನಿಯಲ್ಲಿ ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ವೈದ್ಯರುಗಳ ಸಂಘದ ಅಧ್ಯಕ್ಷ ಡಾ.ರವೀಂದ್ರ ಮಾತನಾಡಿ, ಕೊರೋನ ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಬೆಂಬಲಕ್ಕೆ ನಿಂತು ಕೆಲಸ ಮಾಡಿಸಬೇಕು. ಅದು ಬಿಟ್ಟು ಸಿಇಓ ಏಕವಚನದಲ್ಲಿ ನಿಂದಿಸಿ ಅವರಿಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಈ ಆತ್ಮಹತ್ಯೆ ಒಂದು ರೀತಿಯಲ್ಲಿ ಕೊಲೆ ಆಗಿದೆ. ಹಾಗಾಗಿ ಕೂಡಲೇ ಜಿಪಂ ಸಿಇಓ ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಸಚಿವರನ್ನು ಒತ್ತಾಯಿಸಿದರು.
ವೈದ್ಯರ ಆಕ್ರೋಶದ ಮಾತುಗಳನ್ನು ಸಚಿವ ಡಾ.ಕೆ.ಸುಧಾಕರ್ ಸಮಾಧಾನದಿಂದ ಕೇಳಿಸಿಕೊಳ್ಳುತ್ತಾ ನಿಂತಿದ್ದರೆ ಹೊರತು ಯಾವುದೇ ಮಾತನಾಡಲಿಲ್ಲ. ಸಚಿವರ ಜೊತೆ ಸಂಸದ ಪ್ರತಾಪ್ ಸಿಂಹ, ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.