×
Ad

ಮಗನ ಹುಟ್ಟುಹಬ್ಬದ ದಿನ ಶಾಲೆಗೆ ಸ್ವಂತ ಖರ್ಚಿನಲ್ಲಿ ಪೈಂಟಿಂಗ್ ಮಾಡಿಸಿ ಶಿಕ್ಷಣ ಸಚಿವರ ಮೆಚ್ಚುಗೆಗೆ ಪಾತ್ರರಾದ ಹುಸೈನ್

Update: 2020-08-21 18:37 IST

ಬಾಗಲಕೋಟೆ, ಆ.21: ತನ್ನ ಮಗನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಸರ್ಕಾರಿ ಶಾಲಾ ನೌಕರರೊಬ್ಬರ ಪ್ರಶಂಸಾರ್ಹ ಕೆಲಸಕ್ಕೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಲಕಲ್ ತಾಲೂಕಿನ ಹಿರೇಸಿಂಗನಗುಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ‘ಡಿ’ ಗ್ರೂಪ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಮುಹಮ್ಮದ್ ಹುಸೈನ್ ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದು, ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಗೆ ಪೈಂಟಿಂಗ್ ಮಾಡಿದ್ದಾರೆ. ಸುಮಾರು 30,000 ರೂ. ಖರ್ಚು ಮಾಡುವ ಮೂಲಕ ಅವರು ಶಾಲೆಗೆ ಪೈಂಟಿಂಗ್ ಮಾಡಿ ತಮ್ಮ ಮಗನ ಜನ್ಮ ದಿನವನ್ನು ಸ್ಮರಣೀಯಗೊಳಿಸಿದ್ದಾರೆ.

ಈ ವಿಷಯವನ್ನು ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮುಹಮ್ಮದ್ ಹುಸೇನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಹಮ್ಮದ್ ಹುಸೈನ್ ಅವರಿಗೆ ಪತ್ರ ಬರೆದಿರುವ ಸಚಿವರು, ತಮ್ಮ ಸೀಮಿತ ಸಂಬಳದ ಹೊರತಾಗಿಯೂ ಸೇವೆ ಸಲ್ಲಿಸುತ್ತಿರುವ ಶಾಲೆಗೆ ಪೈಂಟಿಂಗ್ ಮಾಡಿದ ಹುಸೇನ್ ಅವರ ಕಾರ್ಯ ಹೆಮ್ಮೆ ಮತ್ತು ಮೆಚ್ಚುಗೆಯ ವಿಷಯವಾಗಿದೆ' ಎಂದು ತಿಳಿಸಿದ್ದಾರೆ.

ಹುಸೇನ್ ಅವರ ಪ್ರಶಂಸಾರ್ಹ ಕಾರ್ಯವನ್ನು ಪರಿಗಣಿಸಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಭುಬಲನ್ ಅವರು ಶುಕ್ರವಾರ ಶಾಲೆಗೆ ಭೇಟಿ ನೀಡಿ ಹುಸೈನ್ ಅವರಿಗೆ ಮೆಚ್ಚುಗೆಯ ಪತ್ರವನ್ನು ಹಸ್ತಾಂತರಿಸಿದರು. ಜೊತೆಗೆ ಹುಸೇನ್ ಅವರ ಮಗನಿಗೆ ಚೀಲ ಮತ್ತು ಸಮವಸ್ತ್ರವನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News