ಕಾಲ್ ಮಾಡಿದಾಗ ಮಾತನಾಡಲು ಆಗದಿದ್ದರೆ ಟೆಲಿಫೋನ್ ಕಂಪೆನಿಯನ್ನು ವಿಚಾರಿಸಿ: ಗೃಹ ಸಚಿವ ಬೊಮ್ಮಾಯಿ

Update: 2020-08-21 14:49 GMT

ಬೆಂಗಳೂರು, ಆ. 21: `ನಮ್ಮದು ಒಂದು ಜವಾಬ್ದಾರಿಯುತ ಸರಕಾರವಾಗಿದ್ದು, ಟೆಲಿಫೋನ್ ಕದ್ದಾಲಿಕೆ ಮಾಡುವ ಕೆಳಮಟ್ಟಕ್ಕೆ ಹೋಗುವುದಿಲ್ಲ. ನಮಗೆ ಅದರ ಅವಶ್ಯಕತೆಯೂ ಇಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಬಸವರಾಜ ಬೊಮ್ಮಾಯಿ, `ಡಿ.ಕೆ.ಶಿವಕುಮಾರ್ ಅವರ ಟೆಲಿಫೋನ್ ಕದ್ದಾಲಿಕೆ ಪ್ರಶ್ನೆಯೇ ಇಲ್ಲ. ಅವರ ನಾಯಕರು ಫೋನ್ ಕಾಲ್ ಮಾಡಿದಾಗ ಮಾತನಾಡಲು ಸಾಧ್ಯವಾಗಿಲ್ಲ ಅಂದರೆ ಟೆಲಿಫೋನ್ ಕಂಪೆನಿಯನ್ನು ವಿಚಾರಿಸಬೇಕು. ಅದನ್ನು ಟೆಲಿಫೋನ್ ಕದ್ದಾಲಿಕೆ ಎಂದು ಆರೋಪ ಮಾಡುವುದು ಸರಿಯಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

`ಈಗಾಗಲೇ ಅವರು ಭಾಗಿಯಾಗಿದ್ದ ಸರಕಾರ ಟೆಲಿಫೋನ್ ಕದ್ದಾಲಿಕೆ ಮಾಡಿದ್ದನ್ನು ಸಿಬಿಐ ವಿಚಾರಣೆ ಮಾಡುತ್ತಿದೆ. ಟೆಲಿಫೋನ್ ಟ್ಯಾಪಿಂಗ್ ಅನುಭವ ಅವರ ಸರಕಾರದಲ್ಲಿಯೇ ಇರುತ್ತದೆ. ಸರಕಾರವು ಡಿ.ಕೆ.ಶಿವಕುಮಾರ್ ಅವರ ಚಟುವಟಿಕೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಹಾಗೂ ಸರಕಾರಕ್ಕೆ ಅದರ ಅವಶ್ಯಕತೆಯಿರುವುದಿಲ್ಲ' ಎಂದು ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.

`ಡಿ.ಕೆ.ಶಿವಕುಮಾರ್ ಅವರು ಡಿ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಮಾಡಿರುವ ಆರೋಪವು ನಿರಾಧಾರ ಹಾಗೂ ಶುದ್ಧ ಸುಳ್ಳು. ಪೊಲೀಸರು ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಪೊಲೀಸರ ನೈತಿಕ ಬಲವನ್ನು ಕುಗ್ಗಿಸುವ ಪ್ರಯತ್ನ ಹಾಗೂ ಗಲಭೆಕೋರರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದು ಅದು ಎಂದಿಗೂ ಸಾಧ್ಯವಿಲ್ಲ' ಎಂದು ಬಸವರಾಜ ಬೊಮ್ಮಾಯಿ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

ಅಮಾಯಕರಿಗೆ ಶಿಕ್ಷೆಯಾಗದು: `ತನಿಖೆ ಪ್ರಗತಿಯಲ್ಲಿರುವಾಗ ಯಾರೂ ಸಹನೆ ಕಳೆದುಕೊಳ್ಳುವುದು ಬೇಡ. ಸರಕಾರ ಯಾವುದೇ ಇರಲಿ, ಏನಾದರೂ ಇರಲಿ, ನಿಷ್ಠುರ, ನಿಷ್ಪಕ್ಷಪಾತವಾಗಿ ನಮ್ಮ ಪೊಲೀಸರು ಕೆಲಸ ಮಾಡುತ್ತಾರೆ. ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಹಾಗೆಯೇ ಅಮಾಯಕರಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್‍ಡಿಪಿಐ ಮತ್ತು ಪಿಎಫ್‍ಐ ನಿಷೇಧಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆ ಬಳಿಕ ಸಿಎಂ ಕೇಂದ್ರ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆದರೆ, ಅದಕ್ಕೂ ಮೊದಲೇ ಈ ಬಗ್ಗೆ ವ್ಯಾಖ್ಯಾನ ಮಾಡುವುದು ಸಲ್ಲ ಎಂದು ಪ್ರತಿಕ್ರಿಯಿಸಿದರು.

'ಕದ್ದಾಲಿಕೆ ಮಾಡಿದ್ದೆವು' ಎಂಬ ಸತ್ಯ ಹೇಳಿಬಿಡಿ

ಡಿ.ಕೆ.ಶಿವಕುಮಾರ್ ಅವರೇ, ನೀವು ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದಾಗ ಧರ್ಮ-ಸಂಸ್ಕೃತಿಯ ಪ್ರತೀಕ, ಪವಿತ್ರವಾದ ಮನಸ್ಸುಳ್ಳ ಆದಿಚುಂಚನಗಿರಿ, ರಂಭಾಪುರಿ, ಸಿದ್ಧಗಂಗಾಮಠ ಶ್ರೀಗಳು ಸೇರಿದಂತೆ ಏಳು ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದು ನೆನಪಿದೆಯಾ? ಸ್ವಾಮೀಜಿಗಳ ಫೋನ್ ಕದ್ದಾಲಿಕೆಯ ಕೇಸ್ ಇನ್ನೂ ಜೀವಂತವಾಗಿದೆ. ನಿಮ್ಮ ಫೋನ್ ಕದ್ದಾಲಿಕೆ ಮಾಡುವಂತಹ ದರಿದ್ರ ನಮ್ಮ ಸರಕಾರಕ್ಕೆ ಬಂದಿಲ್ಲ. ನಿಮ್ಮ ಹೇಳಿಕೆ ಹಾಸ್ಯಾಸ್ಪದ. ಪ್ರತಿ ಮಾತಿನಲ್ಲೂ ಪ್ರಚಾರ ಬಯಸುತ್ತೀರಲ್ಲ. `ನಾವು ಅಧಿಕಾರದಲ್ಲಿದ್ದಾಗ ಅನೇಕ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದೆವು' ಎಂಬ ಸತ್ಯ ಹೇಳಿಬಿಡಿ ಡಿಕೆಶಿ ಅವರೇ'

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News