ಪ್ರವಾಹ: ಬೆಳಗಾವಿ ಜಿಲ್ಲೆಯಲ್ಲಿ 43 ಸಾವಿರಕ್ಕೂ ಅಧಿಕ ಹೆಕ್ಟೇರ್ ಬೆಳೆಗಳು ಮುಳುಗಡೆ

Update: 2020-08-21 15:27 GMT

ಬೆಳಗಾವಿ, ಆ.21: ಜಿಲ್ಲೆಯಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ಗುರುವಾರದವರೆಗೆ 43,300 ಹೆಕ್ಟೇರ್ ಗೂ ಅಧಿಕ ಬೆಳೆಗಳು ಮುಳುಗಡೆಯಾಗಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧ್‍ಗಂಗಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ಮಲಪ್ರಭಾ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ತೀರಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ನೀರು ವ್ಯಾಪಿಸಿದೆ. ಇದರೊಂದಿಗೆ ಬೆಳಗಾವಿ ತಾಲ್ಲೂಕಿನಲ್ಲಿ ಬಳ್ಳಾರಿ ನಾಲಾ ಪ್ರವಾಹವೂ ಉಂಟಾಗಿದೆ. ಇದರಿಂದಲೂ ಸಾವಿರಾರು ಎಕರೆ ವಿವಿಧ ಬೆಳೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಮಳೆ ಹಾಗೂ ಪ್ರವಾಹದ ಪರಿಸ್ಥಿತಿ ಮುಂದುವರಿದಿದ್ದು, ಬೆಳೆಗಳ ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬಿತ್ತನೆ ಬಹುತೇಕ ಮುಗಿದಿದೆ: ಈ ಹಂಗಾಮಿನಲ್ಲಿ 6.88 ಲಕ್ಷ ಹೆಕ್ಟೇರ್ ನಲ್ಲಿ ವಿವಿಧ ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿತ್ತು. ಈ ಪೈಕಿ ಬಹುತೇಕ ಪ್ರದೇಶಗಳಲ್ಲಿ ಬಿತ್ತನೆಯಾಗಿದೆ. ಭತ್ತ, ಗೋವಿನಜೋಳ, ಸೋಯಾಅವರೆ, ಹೆಸರುಕಾಳು, ಶೇಂಗಾ, ಹತ್ತಿ, ಕಬ್ಬು, ಮುಸುಕಿನಜೋಳ, ಸೂರ್ಯಕಾಂತಿ ಬೆಳೆಯಲಾಗಿದೆ.

ಕೃಷಿ ಇಲಾಖೆಯು ಸಂಗ್ರಹಿಸಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಅತಿ ಹೆಚ್ಚು (17,877 ಹೆಕ್ಟೇರ್ ಗೂ ಅಧಿಕ) ಹಾನಿಗೆ ಒಳಗಾಗಿರುವುದು ಕಬ್ಬು ಬೆಳೆ. ನಂತರದ ಸ್ಥಾನದಲ್ಲಿ ಹೆಸರುಕಾಳು (8,500 ಹೆಕ್ಟೇರ್ ಗೂ ಅಧಿಕ), ಮುಸುಕಿನಜೋಳ (6,043 ಹೆಕ್ಟೇರ್ ಗೂ ಅಧಿಕ), ಭತ್ತ (3,014 ಹೆಕ್ಟೇರ್ ಗೂ ಅಧಿಕ), ಸೋಯಾಅವರೆ (1,710 ಹೆಕ್ಟೇರ್ ಗೂ ಅಧಿಕ), ಸೂರ್ಯಕಾಂತಿ (490 ಹೆಕ್ಟೇರ್ ಗೂ ಅಧಿಕ) ಹಾಗೂ ಇತರೆ (177 ಹೆಕ್ಟೇರ್ ಗೂ ಅಧಿಕ) ಬೆಳೆಗಳಿವೆ.

ಕಳೆದ ವರ್ಷ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಬಂದಿತ್ತು. ಆಗ, 2.17 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಕೈಗೆ  ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯನ್ನು ರೈತರು ಅನುಭವಿಸಿದ್ದರು.

ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಿದ ನಂತರ ನಿಖರವಾದ ಮಾಹಿತಿ ಲಭ್ಯವಾಗಲಿದೆ. ಸಮೀಕ್ಷೆ ಆರಂಭವಾಗಿದೆ

-ಶಿವನಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News