ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು: ಟಿ.ಎಸ್.ನಾಗಾಭರಣ

Update: 2020-08-21 16:28 GMT

ಬೆಂಗಳೂರು, ಆ. 21: ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸುವುದು ಸರಕಾರದ ಆದೇಶದನ್ವಯ ಅವುಗಳ ಜವಾಬ್ದಾರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಇಂದಿಲ್ಲಿ ಸೂಚಿಸಿದ್ದಾರೆ.

ಶುಕ್ರವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕನ್ನಡ ಅನುಷ್ಠಾನದ ಪ್ರಗತಿಯನ್ನು ಜಾಲ ಸಂಪರ್ಕ ಸಭೆಯ ಮೂಲಕ ಪರಿಶೀಲನೆ ನಡೆಸಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡುವವರು ಕಡ್ಡಾಯವಾಗಿ ಗ್ರಾಮೀಣ ಸೇವೆಯನ್ನು ಮಾಡಬೇಕಿದೆ. ಹಳ್ಳಿಗಳಲ್ಲಿ ಸೇವೆ ಸಲ್ಲಿಸುವವರು ಜನಭಾಷೆಯಲ್ಲಿ ರೋಗಿಗಳನ್ನು ಆತ್ಮೀಯವಾಗಿ ಮಾತನಾಡಿಸಿ ರೋಗಗಳ ಗುಣಾವಶೇಷಗಳನ್ನು ಅರಿತರೆ ಸುಲಭವಾಗಿ ಚಿಕಿತ್ಸೆಯನ್ನು ನೀಡಿ ತಮ್ಮ ಸೇವಾಕಾರ್ಯವನ್ನು ಉತ್ತಮವಾಗಿ ಮಾಡಲು ಸಹಕಾರಿ ಎಂದರು.

ವೃತ್ತಿ ಶಿಕ್ಷಣದಲ್ಲಿ ಕನ್ನಡ ಉಳಿದರೆ, ಬಳಕೆಯಲ್ಲೂ ಕನ್ನಡವನ್ನು ಮೆರೆಸಬಹುದಾಗಿದೆ. ಹಾಗಾಗಿ ವೈದ್ಯಕೀಯ ಶಿಕ್ಷಣ ಕಲಿಯುವ ಕನ್ನಡೇತರರಿಗೂ ವ್ಯವಹಾರಿಕ ಕನ್ನಡವನ್ನು ಶಿಕ್ಷಣ ಹಂತದಲ್ಲೇ ಕಲಿಸುವ ಯೋಜನೆಯನ್ನು ವಿಶ್ವವಿದ್ಯಾಲಯಗಳು ಹಮ್ಮಿಕೊಳ್ಳಬೇಕು. ಜೊತೆಗೆ ಕನ್ನಡದ ವೈದ್ಯಕೀಯ ನಿಘಂಟನ್ನು ಮಾಡಿದರೆ ವೈದ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರ ಜೊತೆಗೆ ಆ ಜ್ಞಾನದ ತಿಳುವಳಿಕೆಯನ್ನು ಬಯಸುವ ಹೊರ ಜಗತ್ತಿನ ಮನಸ್ಸುಗಳಿಗೂ ಅನುಕೂಲ ಎಂದರು.

ದಿನೆ ದಿನೇ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ತಮ್ಮೆಲ್ಲಾ ಕೋವಿಡ್ ವಾರಿಯರ್ಸ್‍ಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಅವರು, ಇಂತಹ ದುರಿತಕಾಲದಲ್ಲಿ ಸಲ್ಲಿಸುತ್ತಿರುವ ತಮ್ಮ ಸೇವೆ ಪ್ರಶಂಸನೀಯ ಎಂದು ಅಭಿನಂದನೆಗಳನ್ನು ಸಲ್ಲಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕನ್ನಡೇತರರು ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಅವರುಗಳಿಗೆಲ್ಲ ಅನುಕೂಲವಾಗುವಂತೆ ಮತ್ತು ಸುಲಭವಾಗಿ ಕನ್ನಡ ಕಲಿಯಲು ಸಹಕಾರಿಯಾಗುವ ನಿಟ್ಟಿನಲ್ಲಿ ಪ್ರತ್ಯೇಕ ಪಠ್ಯಪುಸ್ತಕವನ್ನು ರಚಿಸುವುದು ಮತ್ತು ಬೋಧನಾ ಸಮಯವನ್ನು 40 ಗಂಟೆಗಳ ಅವಧಿಗೆ ಹೆಚ್ಚಿಸುವಂತೆ ತಾಕೀತು ಮಾಡಿದರು.

ಶಿಕ್ಷಣ ಹಂತದಲ್ಲೆ ಕನ್ನಡ ಕಲಿಕೆ ಕಡ್ಡಾಯ ಮಾಡುವುದು ಅಗತ್ಯ. ವೃತ್ತಿ ಶಿಕ್ಷಣದಲ್ಲಿ ಕನ್ನಡ ಉಳಿದರೆ, ಬಳಕೆಯಲ್ಲೂ ಕನ್ನಡವನ್ನು ಮೆರೆಸಬಹುದು. ಬೋಧನಾ ಸಮಯ ಹೆಚ್ಚಿಸಲು ತಾಕೀತು. ವಿವಿಯ ಜಾಲತಾಣವನ್ನು ಸಂಪೂರ್ಣ ಕನ್ನಡೀಕರಣಗೊಳಿಸಲು ಸೂಚನೆ, ವೈದ್ಯಕೀಯ ನಿಘಂಟು ರಚನೆಗೆ ಸಲಹೆ, ಕನ್ನಡೇತರರಿಗೆ ವ್ಯವಹಾರಿಕ ಕನ್ನಡ ಕಲಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

ಸಿಎಂ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ, ಪ್ರಾಧಿಕಾರದ ಸದಸ್ಯೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ.ಕಿಶೋರ್, ಡಾ.ವೀರಶೆಟ್ಟಿ, ಡಾ.ಪಿ.ಎಸ್.ಶಂಕರ್, ವಿವಿ ಕುಲಪತಿ ಡಾ.ಎಸ್.ಸಚ್ಚಿದಾನಂದ, ಕುಲಸಚಿವ ಶಿವಾನಂದ ಕಾಪಶಿ, ಡಾ.ಕೆ.ಬಿ.ಲಿಂಗೇಗೌಡ, ಸಮನ್ವಯ ಅಧಿಕಾರಿ ಡಾ.ಬಿ.ವಸಂತ ಶೆಟ್ಟಿ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News