ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರು ನಿರ್ಗತಿಕರಾಗಲಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

Update: 2020-08-21 16:32 GMT

ಬೀದರ್, ಆ.21: ರಾಜ್ಯ ಸರಕಾರ ಭೂ ಸುಧಾರಣೆ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದಾಗಿ ಸಣ್ಣ ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾಗಲಿದ್ದಾರೆಂದು ರೈತ ಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.

ಬಾಲ್ಕಿ ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ಹಾಗೂ ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಂದು ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಯನ್ನು ನಿರ್ಮೂಲನೆ ಮಾಡಿ ಹಣ ಉಳ್ಳವರು ಮಾತ್ರ ಭೂಮಿ ಹೊಂದಲು ಸಾಧ್ಯವಾಗುವಂತಹ ಕಾಯ್ದೆಯನ್ನು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಣ್ಣ ಹಿಡುವಳಿ ಹೊಂದಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರ ಬದುಕು ಬಿಜೆಪಿ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆಯಡಿ ಕೊಚ್ಚಿ ಹೋಗಲಿದೆ. ರೈತಾಪಿ ಕೃಷಿ ಸಂಸ್ಕೃತಿ ನಾಶವಾಗಿ ಬಂಡವಾಳಶಾಹಿ ಸಂಸ್ಕೃತಿ  ಹಳ್ಳಿಗಳಿಗೆ ಪ್ರವೇಶಿಸಲಿವೆ. ಹೀಗಾಗಿ ರಾಜ್ಯದ ರೈತರು ಸೇರಿದಂತೆ ಎಲ್ಲ ಸಮುದಾಯಗಳು ಈ ಕಾಯ್ದೆಯ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು. ಹಾಗೂ ಸರಕಾರ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡಬಾರದೆಂದು ಅವರು ಒತ್ತಾಯಿಸಿದ್ದಾರೆ. ಈ ವೇಳೆ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಬುದ್ದ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ತತ್ವದಡಿ ನಡೆದುಕೊಳ್ಳಬೇಕೆಂದು ಪ್ರತಿಜ್ಞೆ ಬೋಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News