ವ್ಯಕ್ತಿಯ ಕೊಲೆ ಪ್ರಕರಣ: ಆರೋಪಿ ಬಂಧನ
ಬೆಂಗಳೂರು,ಆ.21: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಆರೋಪದಡಿ ಲಾರಿ ಚಾಲಕನನ್ನು ಇಲ್ಲಿನ ಆರ್‍ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ಭೂಕನಕೆರೆಯ ಐಚನಹಳ್ಳಿಯ ಸೋಮ(30) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಶಕ್ತಿ ಕಾರ್ಗೋ ಟ್ರಾನ್ಸ್ ಪೋರ್ಟ್‍ನ ಆರ್‍ಎಂಸಿ ಯಾರ್ಡಿನ ಕಚೇರಿಯಲ್ಲಿ ಮೃತ ವ್ಯಕ್ತಿ ಪ್ರಶಾಂತ್ ಖಾಸಗಿ ಕಂಪೆನಿಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದು, ಅದೇ ಕಂಪೆನಿಯಲ್ಲಿ ಸೋಮ ಕೂಡ ಕೆಲಸ ಮಾಡುತ್ತಿದ್ದನು. ಇಬ್ಬರ ನಡುವೆ ಕೆಲಸದ ವಿಷಯವಾಗಿ ವೈಮನಸ್ಯ ಬೆಳೆದಿದ್ದು, ಕಳೆದ 6 ತಿಂಗಳಿನಿಂದ ಸೋಮನಿಗೆ ಪ್ರಶಾಂತ್ ಸರಿಯಾಗಿ ಬಾಡಿಗೆ ಹಣ ನೀಡದೆ ಸತಾಯಿಸುತ್ತಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕಾಗಿ ಆ.18ರ ರಾತ್ರಿ ಕಚೇರಿ ಬಳಿಯ ಲಾರಿ ನಿಲ್ದಾಣಕ್ಕೆ ಬಂದಿದ್ದ ಸೋಮ ಜಗಳ ತೆಗೆದು ಚಾಕುವಿನಿಂದ ಇರಿದು ಪ್ರಶಾಂತ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.