×
Ad

ನಂಜನಗೂಡು ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ: ಮಾಜಿ ಸಂಸದ ಧ್ರುವನಾರಾಯಣ್

Update: 2020-08-21 23:06 IST

ಮೈಸೂರು,ಆ.21: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ, ಈ ಘಟನೆಗೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆರೋಪಿಸಿದರು.

ನಗರದ ಜಲದರ್ಶಿನಿಯಲ್ಲಿ ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ.ನಾಗೇಂದ್ರ ಓರ್ವ ದಕ್ಷ ಮತ್ತು ಪ್ರಮಾಣಿಕ ಅಧಿಕಾರಿ. ಕಳೆದ 6 ತಿಂಗಳಿನಿಂದ ಹೆಚ್ಚುವರಿ ತಾಲೂಕು ಆರೋಗ್ಯಾಧಿಕಾರಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು. ನಂಜನಗೂಡಿನ ಜ್ಯಬಿಲಿಯಂಟ್ ಕಾರ್ಖಾನೆಗೆ ತಗಲಿದ್ದ ಕೊರೋನ ಸೋಂಕು ತಡೆಗಟ್ಟುವಲ್ಲಿ ಬಹಳ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕೊರೋನ ವಿರುದ್ಧದ ಅವರ ಹೋರಾಟಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಅಂತಹ ಅಧಿಕಾರಿಯನ್ನು ಉಳಿಸಿಕೊಳ್ಳದೆ ಕಳೆದುಕೊಂಡಿರುವುದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರವೇ ನೇರ ಹೊಣೆ ಎಂದು ಹೇಳಿದರು.

ಲಾಕ್ ಡೌನ್ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಮೆಡಿಕಲ್ ಇನ್ಪ್ರಾಸ್ಟ್ರಕ್ಚರ್ ಹೆಚ್ಚಿಸಬೇಕಿದ್ದ ಸರ್ಕಾರ ಹಾಗೂ ಆರೋಗ್ಯ ಸಚಿವರು ಚಿತ್ರದುರ್ಗದಲ್ಲಿ ತೇರು ಎಳೆಯುವುದರಲ್ಲಿ ಬ್ಯುಸಿಯಾಗಿದ್ದರು. ಕೊರೋನ ಉಸ್ತುವಾರಿ ಸಚಿವರು ತಮ್ಮ ನಿವಾಸದಲ್ಲಿ ಸ್ವಿಮ್ಮಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇಡೀ ಸರ್ಕಾರ ವೆಂಟಿಲೇಟರ್, ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನರ್, ಟೆಸ್ಟಿಂಗ್ ಕಿಟ್ ಖರೀದಿಯಲ್ಲೂ ಅವ್ಯವಹಾರದ ಮೂಲಕ 200 ಕೋಟಿ ಲೂಟಿ ಮಾಡಿದೆ. ಬೆಂಗಳೂರಿನಲ್ಲಿ ಸೀಲ್ ಡೌನ್ ಹೆಸರಿನಲ್ಲಿ 2,300 ಕೋಟಿ ಲೂಟಿ ಮಾಡಿದೆ. ಸಚಿವರು ಬೆಂಗಳೂರಿನಲ್ಲೇ ಬೀಡು ಬಿಟ್ಟ ಕಾರಣ ಈಗ ಜಿಲ್ಲಾ ಕೇಂದ್ರಗಳು ಮರಣ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ದೂರಿದರು.

ಪ್ರಾಣ ಒತ್ತೆ ಇಟ್ಟು ಕೊರೋನ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ಸರ್ಕಾರ ಸಂಬಳವನ್ನೇ ನೀಡಿಲ್ಲ. ಕಾಂಗ್ರೆಸ್ ಪಕ್ಷದ ಸರ್ಕಾರಕ್ಕಿಂತ ಹೆಚ್ಚು ಜನರ ಕಾಳಜಿ ವಹಿಸಿ ಕೊರೋನ ವಿರುದ್ಧ ಹೋರಾಡುತ್ತಿರುವಾಗ ನೀವು ಸರ್ಕಾರದಲ್ಲಿದ್ದೂ ದಕ್ಷ ಅಧಿಕಾರಿಗಳನ್ನು ಆತ್ಮಹತ್ಯೆಗೆ ತಳ್ಳುತ್ತಿದ್ದೀರಾ ಅಂದರೆ ನಿಮ್ಮ ಸರ್ಕಾರ ರಾಜ್ಯಕ್ಕೆ ಬೇಕಾ ಎಂದು ಪ್ರಶ್ನಿಸಿದರಲ್ಲದೆ, ಕೊರೋನ ಉಸ್ತುವಾರಿಯಾಗಿದ್ದು 30 ಲಕ್ಷ ಪರಿಹಾರ ಕೊಡುತ್ತೇವೆ ಅಂತ ಬೇಜವಾಬ್ದಾರಿ ಹೇಳಿಕೆ ನೀಡಿ ಇಡೀ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ವೈದ್ಯರಿಂದ ಪ್ರತಿಭಟನೆ ಎದುರಿಸಿ ಜನರಿಗೆ ಚಿಕಿತ್ಸೆ ಸಿಗದಂತೆ ಮಾಡಿರುವ ಸಚಿವ ಡಾ.ಕೆ.ಸುಧಾಕರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಮುಖಂಡ ಎಚ್.ಎ.ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥತಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News