×
Ad

ಕಪ್ಪು ಬಾವುಟ ಪ್ರದರ್ಶನ ಯತ್ನಕ್ಕೆ ತಡೆ: ಸಿಎಂ ಯಡಿಯೂರಪ್ಪ, ಪೊಲೀಸರ ವಿರುದ್ಧ ರೈತರ ಆಕ್ರೋಶ

Update: 2020-08-21 23:21 IST

ಮಂಡ್ಯ, ಆ.21: ಕೆಆರ್‍ಎಸ್‍ಗೆ ಬಾಗಿನ ಅರ್ಪಣೆ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ತೀರ್ಮಾನಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಮಾರ್ಗಮಧ್ಯೆಯೇ ಪೊಲೀಸರು ತಡೆದು ಬಂಧಿಸಿದರು.

ಕೆಆರ್‍ಎಸ್ ವ್ಯಾಪ್ತಿಯ ಕಲ್ಲುಗಣಿಗಾರಿಕೆ ಶಾಶ್ವತ ನಿಷೇಧ, ಭೂ ಸುಧಾರಣಾ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆಯಲು, ವಿದ್ಯುತ್ ಖಾಸಗೀಕರಣ ಕೈಬಿಡಲು, ಮೈಶುಗರ್ ಆರಂಭಿಸಲು ಒತ್ತಾಯಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಈ ಚಳವಳಿಗೆ ಜಿಲ್ಲೆಯ ನಾನಾ ಭಾಗಗಳಿಂದ ಪ್ರತಿಭಟನಾಕಾರರು ಆಗಮಿಸುತ್ತಿದ್ದಂತೆಯೇ ಪೊಲೀಸರು ಅವರನ್ನು ಬಂಧಿಸಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ, ರೈತಸಂಘದ ಮಂಜೇಗೌಡ ದೊಡ್ಡಪಾಳ್ಯ ಅವರನ್ನು ಅವರ ನಿವಾಸದಲ್ಲೇ ವಶಕ್ಕೆ ಪಡೆದ ಪೊಲೀಸರು, ಉಳಿದವರನ್ನು ಕೆಆರ್‍ಎಸ್ ಬಳಿಯ ಕಟ್ಟೇರಿ ಗ್ರಾಮದ ಬಳಿ ತಡೆದರು.

ಕಟ್ಟೇರಿ ಬಳಿ ತಮ್ಮನ್ನು ತಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲುಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ, ಇತರ ಮುಖಂಡರು ಹಾಗೂ ಕಾರ್ಯಕರ್ತರು, ಸಿಎಂ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಸರಕಾರವಿದ್ದಾಗ ಚುನಾವಣಾ ಪ್ರಚಾರದಲ್ಲಿದ್ದ ಯಡಿಯೂರಪ್ಪ, ಕೆಆರ್‍ಎಸ್ ವ್ಯಾಪ್ತಿ ಕಲ್ಲುಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಆಗ್ರಹಿಸಿದ್ದರು. ಆದರೆ, ತಾವೇ ಮುಖ್ಯಮಂತ್ರಿಯಾಗಿ ನಿಷೇಧ ಮಾಡಿಲ್ಲ. ಹಾಗಾಗಿ ಕಪ್ಪು ಬಾವುಟ ಪ್ರದರ್ಶಿಸಲು ತೀರ್ಮಾನಿಸಿದ್ದೆವು ಎಂದು ಕೆಂಪೂಗೌಡ ಹೇಳಿದರು.

ಸರಕಾರ ನಮ್ಮನ್ನು ಇಂದು ತಡೆದಿರಬಹುದು. ಆದರೆ, ನಮ್ಮ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೂಡಲೇ ಸರಕಾರ ಗಣಿಗಾರಿಕೆ ನಿಷೇಧಿಸಬೇಕು. ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಬೇಕು ಎಂದು ಅವರು ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News