ಮೈಸೂರು: ಸರಕಾರದ ಜೊತೆಗಿನ ಮಾತುಕತೆ ಯಶಸ್ವಿ; ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಿದ ವೈದ್ಯರು
ಬೆಂಗಳೂರು, ಆ. 23: ಮೈಸೂರಿನ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಅವರಿಗೆ ಕಿರುಕುಳ ನೀಡಿದ ಮೇಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದ ವೈದ್ಯರು ಸರಕಾರದ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಲು ತೀರ್ಮಾನಿಸಿದ್ದಾರೆ.
ಪ್ರತಿಭಟನಾನಿರತ ವೈದ್ಯರೊಂದಿಗೆ ಸರಕಾರ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಸರಕಾರಿ ವೈದ್ಯರ ಸಂಘದ ಪ್ರತಿನಿಧಿಗಳು ಸಭೆ ನಡೆಸಿ ಕರ್ತವ್ಯಕ್ಕೆ ಹಾಜರಾಗಲು ತೀರ್ಮಾನಿಸಿದ್ದಾರೆ. ಕೋರೋನ ಸೋಂಕಿನ ಸಂಕಷ್ಟ ಪರಿಸ್ಥಿತಿಯಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆದರೆ, ವೈದ್ಯರಿಗೆ ಕಿರುಕುಳ, ಒತ್ತಡ ಹೇರುವಂತಹ ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ ಎಂಬ ಎಚ್ಚರಿಕೆ ನೀಡಿ ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿರುವ ಹೋರಾಟವನ್ನು ಹಿಂಪಡೆಯುತ್ತಿದ್ದೇವೆ ಎಂದು ವೈದ್ಯಾಧಿಕಾರಿಗಳ ಸಂಘ ತಿಳಿಸಿದೆ.
ಭರವಸೆಗೆ ಬೆಲೆ: `ನಂಜನಗೂಡು ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಹಾಗೂ ಕೆಲವು ಬೇಡಿಕೆಗಳೊಂದಿಗೆ ಪ್ರತಿಭಟನೆಗೆ ಮುಂದಾಗಿದ್ದ ವೈದ್ಯಾಧಿಕಾರಿಗಳು, ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ನನ್ನ ಭರವಸೆಗೆ ಬೆಲೆ ಕೊಟ್ಟು ವೈದ್ಯರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
'ಇಲಾಖೆಯ ವೈದ್ಯಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ವ್ಯಾಪಿಸುತ್ತಿರುವ ಸನ್ನಿವೇಶದಲ್ಲಿ ಜನರ ಆರೈಕೆಗೆ ನಿಮ್ಮೆಲ್ಲರ ಸೇವೆ ಅತ್ಯಗತ್ಯ. ಈ ಜವಾಬ್ದಾರಿ ಅರಿತು ಸಾರ್ವಜನಿಕ ಹಿತದೃಷ್ಟಿಯಿಂದ ಮುಷ್ಕರ ನಡೆಸುವ ನಿರ್ಧಾರ ಹಿಂಪಡೆದಿರುವ ಎಲ್ಲ ಆರೋಗ್ಯಾಧಿಕಾರಿಗಳಿಗೆ ಧನ್ಯವಾದಗಳು' ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ನಾಲ್ಕೈದು ತಿಂಗಳಿನಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿಗಳ ಪರಿವೆ ಮರೆತು ರಜೆ ರಹಿತವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಮೇಲಾಧಿಕಾರಿಗಳ ಒತ್ತಡದಿಂದ ಕಿರುಕುಳವಾಗುತ್ತಿದೆ. ಹಲವು ಸೂಕ್ಷ್ಮ ಮನಸ್ಥಿತಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಅಧಿಕಾರಿಗಳು ವೈದ್ಯರ ಮೇಲೆ ಅನಗತ್ಯ ಕಿರುಕುಳ ನಿಲ್ಲಿಸಬೇಕು ಎಂದು ಮುಷ್ಕರ ನಿರತ ವೈದ್ಯರು ಆಗ್ರಹಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಗೆ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಅನಿವಾರ್ಯ. ವೈದ್ಯರ ಮೇಲೆ ಇದೇ ರೀತಿ ಕಿರುಕುಳ ನಡೆದರೆ ನಾವು ಕೈಕಟ್ಟಿಕೊಂಡು ಕೂರುವುದಿಲ್ಲ. ಎಲ್ಲವನ್ನು ಸಹಿಸಿಕೊಂಡು ಸುಮ್ಮನಿರುವುದಿಲ್ಲ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ. ಕಿರುಕುಳ ಹೀಗೆ ಮುಂದುವರಿಸಿದರೆ ಹೋರಾಟದ ಸ್ವರೂಪ ಬದಲಾಯಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರಕ್ಕೆ ಅರಿವಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ವೈದ್ಯರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ, ನಿನ್ನೆ ಕರೆ ನೀಡಲಾಗಿದ್ದ ಮುಷ್ಕರ ವಾಪಸ್ ಪಡೆದಿರುವ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಧನ್ಯವಾದಗಳು
-ಡಾ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ
ಕೋರೋನ ವಿರುದ್ಧ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಅವಿರತ ಶ್ರಮವಹಿಸುತ್ತಿದ್ದು, ಎಂದಿಗೂ ಅವಿಸ್ಮರಣೀಯ. ಸಿಎಂ ಬಿಎಸ್‍ವೈ ಅವರು ವೈದ್ಯರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಮುಷ್ಕರವನ್ನು ಹಿಂಪಡೆದಿರುವ ವೈದ್ಯರ ಕ್ರಮವನ್ನು ಸ್ವಾಗತಿಸುತ್ತೇನೆ. ಕೋವಿಡ್-19 ಸನ್ನಿವೇಶದಲ್ಲಿ ಜನರ ಆರೈಕೆಗೆ ಮುಂದಾಗುತ್ತಿರುವುದಕ್ಕೆ ವೈದ್ಯ ಸಮೂಹವನ್ನು ಅಭಿನಂದಿಸುತ್ತೇನೆ
-ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲಾ ಉಸ್ತುವಾರಿ