ರಾಯಚೂರು ಕೋವಿಡ್ ಆಸ್ಪತ್ರೆಯಲ್ಲಿ ಹಂದಿಗಳ ಹಾವಳಿ

Update: 2020-08-23 11:51 GMT

ರಾಯಚೂರು, ಆ. 23: ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ರಾಯಚೂರು ನಗರದ ಓಪೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದೊಳಗೆ ಹಂದಿಗಳ ಹಿಂಡು ಕಂಡುಬಂದಿದ್ದು, ಅವ್ಯವಸ್ಥೆ ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಕೊರೋನ ರೋಗಿಯೊಬ್ಬರ ಸಂಬಂಧಿಯು ಕೋವಿಡ್ ವಾರ್ಡ್ ಅವ್ಯವಸ್ಥೆಯನ್ನು ವಿಡಿಯೋ ಮಾಡಿದ್ದು, ಇಂತಹ ಅವ್ಯವಸ್ಥೆ ಇರುವ ಆಸ್ಪತ್ರೆಯಲ್ಲಿ ಕೊರೋನದಿಂದ ಬಳಲುತ್ತಿರುವವರಿಗೆ ಯಾವ ರೀತಿಯ ಚಿಕಿತ್ಸೆ ನೀಡಲು ಸಾಧ್ಯ ಎಂದು ರೋಗಿಯ ಸಂಬಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ಕಟ್ಟಡದೊಳಗೆ ಗುಡ್ಡೆ ಹಾಕಿರುವ ವೈದ್ಯಕೀಯ ತ್ಯಾಜ್ಯಗಳ ಮೂಟೆಗಳೊಂದಿಗೆ ಹಂದಿಗಳ ಹಿಂಡು ಇರುವುದು ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಬಸವರಾಜ ಪೀರಾಪುರ ಮಾತನಾಡಿ, ಆಸ್ಪತ್ರೆ ಕಟ್ಟಡದೊಳಗಿದ್ದ ಹಂದಿಗಳ ತೆರವು ಕಾರ್ಯಾಚರಣೆ ಮಾಡಲಾಗಿದೆ. ಆದರೆ, ಪರಿಸ್ಥಿತಿ ಹತೋಟಿಗೆ ಬಂದಿರಲಿಲ್ಲ. ಈಗಷ್ಟೇ ಮತ್ತೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ರವಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಹಂದಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News