×
Ad

ಹಿಂದಿ ಶ್ರೇಷ್ಠತೆಯ ಗೀಳಿನಲ್ಲಿರುವ ಆಯುಷ್ ಕಾರ್ಯದರ್ಶಿ ವಿರುದ್ಧ ಕ್ರಮಕೈಗೊಳ್ಳಿ: ಕೆಂದ್ರಕ್ಕೆ ಎಚ್‍ಡಿಕೆ ಆಗ್ರಹ

Update: 2020-08-23 17:31 IST

ಬೆಂಗಳೂರು, ಆ. 23: `ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿಯಲ್ಲಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ `ಹಿಂದಿ ಮಾತನಾಡಲು ಆಗದವರು ತರಬೇತಿಯಿಂದ ಹೊರನಡೆಯಬಹುದು. ನನಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ' ಎಂದು ಹೇಳಿರುವುದು ತಿಳಿಯಿತು. ಇದೇನು ಇಂಗ್ಲಿಷ್ ಬಾರದೆಂಬ ವಿನಂತಿಯೋ, ಹಿಂದಿ ಹೇರಬೇಕು ಎಂಬ ನಾಚಿಕೆ ಇಲ್ಲದ ಉತ್ಸಾಹವೋ?' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಸಂವಿಧಾನ ಬದ್ಧ ಒಕ್ಕೂಟ ವ್ಯವಸ್ಥೆ ಎಂಬುದು ಈ ದೇಶದ ಒಗ್ಗಟ್ಟಿನ ಮಂತ್ರ. ಇಲ್ಲಿನ ಪ್ರತಿ ಭಾಷೆಗಳೂ ಒಕ್ಕೂಟ ವ್ಯವಸ್ಥೆಯ ಭಾಗ. ಹೀಗಿರುವಾಗ, ಹಿಂದಿ ಮಾತನಾಡಲು ಬಾರದ ಕಾರಣಕ್ಕೆ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಿ ಎಂಬುದು ಒಕ್ಕೂಟ ವ್ಯಸ್ಥೆಯ ಉಲ್ಲಂಘನೆಯಲ್ಲವೇ? ಸಂವಿಧಾನ ವಿರೋಧಿ ನಡೆಯಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

ಹಿಂದಿ ಬಾರದೆಂಬ ಕಾರಣಕ್ಕೆ ಕನ್ನಡಿಗರೂ ಸೇರಿದಂತೆ ಮಿಕ್ಕೆಲ್ಲ ಭಾಷೆಗಳ ಜನ ಈ ದೇಶದಲ್ಲಿ ಇನ್ನೆಷ್ಟು ತ್ಯಾಗ ಮಾಡಬೇಕು? ಹಿಂದಿ ಶ್ರೇಷ್ಠತೆಯ ಗೀಳಿನಲ್ಲಿರುವ ಆಯುಷ್ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಅವರ ವಿರುದ್ಧ ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು' ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News