ಕೊರೋನ ಹೆಸರಿನಲ್ಲಿ ಮೋದಿ ಕಲೆಕ್ಷನ್ ಏಜೆಂಟ್ ಆಗಿದ್ದಾರಾ: ದಿನೇಶ್ ಗುಂಡೂರಾವ್ ವಾಗ್ದಾಳಿ
ಬೆಂಗಳೂರು, ಆ.23: ಕೊರೋನ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಲೆಕ್ಷನ್ ಏಜೆಂಟ್ ಆಗಿದ್ದಾರಾ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೊರೋನ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿದ ಪಿಎಂ ಕೇರ್ಸ್ ಗೆ ಅಪ್ಪ-ಅಮ್ಮ ಇಲ್ಲವಂತೆ. ಹಾಗಾದರೆ ಪ್ರಧಾನಿ ಮೋದಿ ಕೊರೋನ ಹೆಸರಲ್ಲಿ ಕಲೆಕ್ಷನ್ ಏಜೆಂಟ್ ಆಗಿದ್ದಾರಾ ಅಥವಾ ಸೋಂಕಿನ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ದುಡ್ಡನ್ನು ಮನೆ ಖರ್ಚಿಗೆ ಬಳಸಿಕೊಳ್ಳುತ್ತಿದ್ದಾರಾ. ಪಾರದರ್ಶಕತೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅದೇ ರೀತಿ, ವೈದ್ಯ ನಾಗೇಂದ್ರ ಅವರ ಆತ್ಮಹತ್ಯೆಯ ಹಿಂದಿನ ಕಾರಣವೂ ಇಂದು ಬಯಲಾಗಲೇಬೇಕು. ಸಾಂತ್ವನದ ಮಾತುಗಳಿಂದ ಸತ್ಯ ಬಚ್ಚಿಡುವ ಪ್ರಯತ್ನ ಮಾಡಬೇಡಿ. ಪ್ರತಿಯೊಂದಕ್ಕೂ ಕಿರಚಿ ಸುದ್ದಿ ಮಾಡುವ ಹಾಗೂ 'ಪಿಟೀಲು' ಕುಯ್ಯುವ ಬಿಜೆಪಿಯ ಮಹಾಮಹಿಮ ನಾಯಕರು ವೈದ್ಯ ನಾಗೇಂದ್ರ ಆತ್ಮಹತ್ಯೆಯ ನೈಜ ಕಾರಣವೇನೆಂದು ಜನರ ಮುಂದೆ ಬಾಯಿ ಬಿಡಲಿ ಎಂದು ಅವರು ಒತ್ತಾಯಿಸಿದ್ದಾರೆ