ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಶೇ.60ರಷ್ಟು ಮುಸಲ್ಮಾನರಿದ್ದಾರೆ: ಸಾಹಿತಿ ಕುಂ.ವೀರಭದ್ರಪ್ಪ
ಚಿಕ್ಕಮಗಳೂರು, ಆ.23: ಈ ದೇಶ ಶೇ.2ರಷ್ಟಿರುವ ಸಮುದಾಯಕ್ಕೆ ಸೇರಿದ್ದಲ್ಲ. ಇದು ಎಲ್ಲರಿಗೂ ಸೇರಿದೆ, ಎಲ್ಲ ವರ್ಗದವರೂ ಈ ರಾಷ್ಟ್ರವನ್ನು ಕಟ್ಟಿ ಬೆಳೆಸಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಶೇ.60ರಷ್ಟು ಮುಸಲ್ಮಾನರಿದ್ದಾರೆ. ಹಾಗಾಗಿ ನಾವು ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.
ಜಿಲ್ಲಾ ಕಸಾಪ ಮತ್ತು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ನಗರದ ಸುವರ್ಣ ಕನ್ನಡ ಭವನದಲ್ಲಿ ರವಿವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ, 10ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅವರ ದೇವರಗುಡ್ಡ ಕಥಾ ಸಂಕಲನವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯ ನಮ್ಮ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ, ಮನಸ್ಸನ್ನು ವಿಕಸನಗೊಳಿಸುತ್ತದೆ, ಪ್ರತಿಭಟನೆಯಿಲ್ಲದ ಯಾವುದೇ ಸಾಹಿತ್ಯ ಮತ್ತು ಕೃತಿಯಿಲ್ಲ, ನೋಬಲ್ ಪ್ರಶಸ್ತಿ ಪುರಸ್ಕೃತ ಕೃತಿಗಳೂ ಸಹ ಪ್ರತಿಭಟನೆ ಎದುರಿಸಿವೆ. ಲೇಖಕ ತನ್ನ ಬರವಣಿಗೆಯಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸಬೇಕು, ಪ್ರತಿಭಟಿಸಬೇಕು. ಮೂಢನಂಬಿಕೆ, ಸಾಮಾಜಿಕ ಪಿಡುಗುಗಳ ವಿರುದ್ಧ ಬರೆಯಬೇಕು ಎಂದು ಸಲಹೆ ಮಾಡಿದರು
ಸರಕಾರಿ ಶಾಲೆಗಳನ್ನು ಮುಚ್ಚುವುದು ಅಪಾಯಕಾರಿ ಧೋರಣೆ, ಸರಕಾರಿ ಶಾಲೆಗಳನ್ನು ಮುಚ್ಚುವುದೆಂದರೆ ನಮ್ಮ ಹೃದಯವನ್ನು ಮುಚ್ಚಿದಂತೆ. ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಸಮಾಜಮುಖಿಗಳಾಗಿರುತ್ತಾರೆ, ದೇಶ ಭಕ್ತರಾಗಿರುತ್ತಾರೆ. ಆಂಗ್ಲ ಮಾಧ್ಯಮದಲ್ಲಿ ಓದುವವರು ತಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ. ಅನ್ನ ಕೊಡುವ ಶಕ್ತಿ ಇರುವುದು ಕನ್ನಡಕ್ಕೆ ಹಾಗಾಗಿ ನಾವು ಮಾತೃಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಕೇಂದ್ರ ಸರಕಾರದ ನೂತನ ಶಿಕ್ಷಣ ನೀತಿ ಕೀಳರಿಮೆಯಿಂದ ಮುಕ್ತಗೊಂಡು ಆತ್ಮವಿಶ್ವಾಸದಿಂದ ತುಡಿಯುತ್ತಿರುವಂತಹ, ಸ್ವಾವಲಂಬನೆಯ ಹಾದಿಯಲ್ಲಿ ಸಾಗುವಂತಹ, ಸಮಾಜಮುಖಿಯಾಗಿ ಯೋಚಿಸುವಂತಹ ಹೊಸ ಪೀಳಿಗೆಯನ್ನು ರೂಪಿಸುತ್ತದೆ. ಮಾತೃಭಾಷೆಯ ಶಿಕ್ಷಣದಿಂದ ಮೊದಲ್ಗೊಂಡು ರಾಜ್ಯ ಭಾಷೆಗೆ ಆದ್ಯತೆ ನೀಡುವುದರ ಜೊತೆಗೆ ಮಕ್ಕಳ ಮನೋವಿಕಾಸಕ್ಕೆ ಅವಕಾಶ ನೀಡುವಂತಹ ಕೌಶಲ್ಯವನ್ನು ಎಳೆತನದಿಂದಲೇ ಕಲಿಸುವಂತಹ ಸ್ವಾವಲಂಬಿಯಾಗಿ ಬದುಕುವಂತಹ ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ 7 ವರ್ಷಗಳ ಅನುಭವದ ಆಧಾರದಲ್ಲಿ ರೂಪಿಸಿದೆ ಎಂದರು.
ವಿದ್ಯೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಅದು ಸಾಧಕರ ಸೊತ್ತು. ಒಂದು ಕಾಲದಲ್ಲಿ ನಿರ್ದಿಷ್ಟ ಸಮುದಾಯದವರು ಮತ್ತು ನಗರ ಪ್ರದೇಶದವರು ಮಾತ್ರ ವಿದ್ಯಾವಂತರಾಗುತ್ತಿದ್ದರು. ಆದರೆ ಇಂದು ರೈತರು, ಕೂಲಿಕಾರ್ಮಿಕರ ಮಕ್ಕಳು, ಗ್ರಾಮೀಣ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಂಕ ಗಳಿಸುವುದೇ ಸಾಧನೆಯ ಮೆಟ್ಟಿಲಲ್ಲ, ಅದು ಮಕ್ಕಳ ಸಾಧನೆಗೆ ಸಾಧನವಾಗಬೇಕು. ಆದರೆ ಅದೇ ಅಂತಿಮ ಗುರಿಯಾಗಬಾರದು. ಶಿಕ್ಷಣವೆಂದರೆ ಅರಿವನ್ನು ಮೂಡಿಸುವುದು, ಮನೋವಿಕಾಸಕ್ಕೆ ದಾರಿ ಮಾಡಿಕೊಡುವುದು ಎಂದ ಅವರು, ಶಿಕ್ಷಣ ಪರಾವಲಂಬನೆಯಿಂದ ಸ್ವಾಲವಂಬನೆಯ ಕಡೆಗೆ ಕರೆದುಕೊಂಡು ಹೋಗಬೇಕು. ಸ್ವಾರ್ಥದಿಂದ ಸಮಜಮುಖಿಯನ್ನಾಗಿ ಮಾಡಬೇಕು. ಆಗ ಮಾತ್ರ ಶಿಕ್ಷಣದ ಪರಿಪೂರ್ಣತೆಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. 10ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಐ.ಪಿ.ತನ್ಮಯಿ, ಕೆ.ಸಿ.ಸಂಜನಾ, ಕೆ.ಎಸ್.ಸುರಕ್ಷಾ, ಪಿ.ಹರ್ಷಿತಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಸಾಹಿತಿ ರವೀಶ್ ಬಸಪ್ಪ ಅವರಿಗೆ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇದೇ ವೇಳೆ ಡಾ.ಜೆ.ಪಿ.ಕೃಷ್ಣೇಗೌಡ ಮತ್ತು ಕುಂದೂರು ಭದ್ರಮ್ಮ ಕಲ್ಲೇಗೌಡ ದತ್ತಿ ಉಪನ್ಯಾಸ ನಡೆಯಿತು. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿದರು. ನ್ಯಾಯವಾದಿ ಮಡ್ಡಿಕೆರೆ ಗೋಪಾಲ್, ಕಸಾಪ ಹಿರಿಯ ಸದಸ್ಯ ಭೈರೇಗೌಡ, ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸಮೂರ್ತಿ, ಸಂಘಟನಾ ಕಾರ್ಯದರ್ಶಿ ಕೆ.ಚಂದ್ರಯ್ಯ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಖಜಾಂಚಿ ಪ್ರೊ.ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿದರು, ಪ್ರಧಾನ ಸಂಚಾಲಕ ಎಂ.ಆರ್.ಪ್ರಕಾಶ್ ವಂದಿಸಿದರು.