ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆಯಾಗಲಿ: ಮೆಡಿಕಲ್-ಡೆಂಟಲ್ ವಿದ್ಯಾರ್ಥಿ ವೇದಿಕೆ ಒತ್ತಾಯ
ಬೆಂಗಳೂರು, ಆ. 23: ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಮಾಡಬೇಕೆಂದು ಮೆಡಿಕಲ್ ಮತ್ತು ಡೆಂಟಲ್ ವಿದ್ಯಾರ್ಥಿ ವೇದಿಕೆ(ವೈಟ್‍ಸ್ಪಾರ್ಕ್) ರಾಜ್ಯ ಸಂಚಾಲಕ ಎಸ್.ಎಚ್.ಹಣವಂತ ಒತ್ತಾಯಿದ್ದಾರೆ.
ರವಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯಾದ್ಯಂತ ಕೋವಿಡ್ ನಿಯಂತ್ರಣದಲ್ಲಿ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಅತಿಯಾದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೂ ಮೇಲಿನ ಅಧಿಕಾರಿಗಳ ಕಿರುಕುಳಗಳು ವೈದ್ಯರನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತಿದೆ. ಈ ಹಿನ್ನೆಲೆಯಲ್ಲಿಯೇ ವೈದ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ,
ರಾಜ್ಯ ಸರಕಾರ ಸಾರ್ವಜನಿಕ ಆರೋಗ್ಯ ಇಲಾಖೆಯನ್ನು ಕಡೆಗಣಿಸುತ್ತಾ ಖಾಸಗೀಕರಣದ ನೀತಿಗಳನ್ನು ಅನುಸರಿಸುತ್ತಾ ಬಂದಿದೆ. ಈ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಮೂಲಭೂತ ಸೌಲಭ್ಯಗಳು ಇಲ್ಲವಾಗಿದೆ. ವೈದ್ಯರು, ಸಿಬ್ಬಂದಿಗಳು ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸೌಲಭ್ಯಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇವೆಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಮೆಡಿಕಲ್ ಮತ್ತು ಡೆಂಟಲ್ ವಿದ್ಯಾರ್ಥಿಗಳ ವೇದಿಕೆಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಮೆಡಿಕಲ್ ಸರ್ವಿಸ್ ಸೆಂಟರ್ ವೈದ್ಯರು ಆನ್‍ಲೈನ್ ಮೂಲಕ ಪ್ರತಿ ಭಟನೆ ನಡೆಸಿದರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.