‘ಪಿಎಂ ಕೇರ್ಸ್’ ನಿಧಿ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ!

Update: 2020-08-23 15:56 GMT

ಹೊಸದಿಲ್ಲಿ,ಆ.23: ಪಿಎಂ ಕೇರ್ಸ್ ನಿಧಿಯು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರವಲ್ಲ, ಹೀಗಾಗಿ ಈ ನಿಧಿಯಿಂದ ಮಾಡಲಾಗುವ ವೆಚ್ಚಗಳ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಕಚೇರಿಯು ನಿರಂತರವಾಗಿ ಹೇಳುತ್ತಲೇ ಬಂದಿದೆ. ಆದರೆ ಆರ್‌ಟಿಐ ಕಾರ್ಯಕರ್ತರ ಕೈಸೇರಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ)ದ ಕಡತ ಟಿಪ್ಪಣಿಗಳು ನಿಧಿಯು ಸೃಷ್ಟಿಯಾದ ದಿನವೇ ಅದನ್ನು ಕೇಂದ್ರ ಸರಕಾರವು ಸ್ಥಾಪಿಸಿತ್ತು, ಹೀಗಾಗಿ ಆರ್‌ಟಿಐ ಕಾಯ್ದೆಯ ಕಲಂ 2(ಎಚ್) ಅಡಿ ಅದು ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂದು ಘೋಷಿಸಿತ್ತು ಎಂದು Thewire.in ವರದಿ ಮಾಡಿದೆ.

ಕೊರೋನ ವೈರಸ್ ಬಿಕ್ಕಟ್ಟಿನ ಸಂದರ್ಭ ವಿಪತ್ತು ಪರಿಹಾರಕ್ಕಾಗಿ ತುರ್ತು ಕ್ರಮವಾಗಿ 2020,ಮಾ.27ರಂದು ‘ಪಿಎಂ ಕೇರ್ಸ್ ನಿಧಿಗೆ ದೇಣಿಗೆಗಳ ಕುರಿತು ಸ್ಪಷ್ಟನೆ ’ ಎಂಬ ಶೀರ್ಷಿಕೆಯ ಎಂಸಿಎ ಕಡತವೊಂದು, ಪಿಎಂ ಕೇರ್ಸ್ ನಿಧಿಯನ್ನು ಕೇಂದ್ರ ಸರಕಾರವು ಸ್ಥಾಪಿಸಿರುವುದರಿಂದ ಕಂಪನಿಗಳ ಕಾಯ್ದೆಯ ಏಳನೇ ಅನುಸೂಚಿಯ ಐಟಂ ನಂ.viiiರಡಿ ಈ ನಿಧಿಗೆ ಭಾರತೀಯ ಕಂಪನಿಗಳು ಸಲ್ಲಿಸುವ ಎಲ್ಲ ದೇಣಿಗೆಗಳು ಅವುಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಬಾಧ್ಯತೆ (ಸಿಎಸ್‌ಆರ್)ಗಳಾಗಿ ಅರ್ಹತೆ ಪಡೆಯುತ್ತವೆ ಎಂದು ಹೇಳಿತ್ತು.

ಆದರೆ ಪಿಎಂ ಕೇರ್ಸ್ ನಿಧಿ ಕುರಿತು ಎಂಸಿಎ ನಿಲುವನ್ನು ತಟಸ್ಥಗೊಳಿಸಲು ಭಾರತೀಯ ಕಂಪನಿಗಳ ಕಾಯ್ದೆಯನ್ನೇ ಎರಡು ತಿಂಗಳ ಬಳಿಕ (ಮೇ 26ರಂದು) ಪೂರ್ವಾನ್ವಯಗೊಳ್ಳುವಂತೆ ತಿದ್ದುಪಡಿಗೊಳಿಸಲಾಗಿದೆ. ಈ ತಿದ್ದುಪಡಿಯಂತೆ ಸಿಎಸ್‌ಆರ್ ಚಟುವಟಿಕೆಯು ನಿಧಿಯನ್ನು ಕೇಂದ್ರ ಸರಕಾರವು ಸ್ಥಾಪಿಸಿದೆಯೇ ಇಲ್ಲವೇ ಎನ್ನುವುದನ್ನು ಅವಲಂಬಿಸುವುದಿಲ್ಲ. ಪಿಎಂ ಕೇರ್ಸ್ ನಿಧಿಯನ್ನು ಸಾರ್ವಜನಿಕ ಪ್ರಾಧಿಕಾರ ವ್ಯಾಪ್ತಿಯಿಂದ ಹೊರಕ್ಕೆ ತರಲು ಎಂಸಿಎ ಕಂಪನಿಗಳ ಕಾಯ್ದೆಯ ಏಳನೇ ಅನುಸೂಚಿಗೆ ತಿದ್ದುಪಡಿ ತಂದಿತ್ತು.

 ಪಿಎಂ ಕೇರ್ಸ್ ನಿಧಿ ಕುರಿತು ಆರ್‌ಟಿಐ ಕಾಯ್ದೆಯಡಿ ಪ್ರಧಾನಿ ಕಚೇರಿಗೆ ಹಲವಾರು ವಿಚಾರಣಾ ಅರ್ಜಿಗಳು ಸಲ್ಲಿಕೆಯಾದ ಬೆನ್ನಲ್ಲೇ ಈ ಬೆಳವಣಿಗೆಯು ನಡೆದಿತ್ತು. ಅಲ್ಲಿಯವರೆಗೆ ಈ ಅರ್ಜಿಗಳಿಗೆ ಉತ್ತರಿಸುವುದನ್ನು ಪ್ರಧಾನಿ ಕಚೇರಿಯು ತಡೆಹಿಡಿದಿತ್ತು. ಆದರೆ ಕಂಪನಿಗಳ ಕಾಯ್ದೆಗೆ ಪೂರ್ವಾನ್ವಯಿತ ತಿದ್ದುಪಡಿಯನ್ನು ತಂದ ಮೂರು ದಿನಗಳಲ್ಲಿ,ಮೇ 29ರಂದು ಮೊದಲ ಬಾರಿಗೆ,ಪಿಎಂ ಕೇರ್ಸ್ ನಿಧಿಯು ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಾನೂನು ವಿದ್ಯಾರ್ಥಿ ಹರ್ಷ ಕಂದಕೂರಿ ಸಲ್ಲಿಸಿದ್ದ ಅರ್ಜಿಗೆ ಉತ್ತರದಲ್ಲಿ ತಿಳಿಸಿತ್ತು.

ಪಿಎಂ ಕೇರ್ಸ್ ನಿಧಿಯನ್ನು ಕೇಂದ್ರ ಸರಕಾರವು ಸ್ಥಾಪಿಸಿದ್ದು ಎಂಬ ನಿಲುವಿಗೆ ಎಂಸಿಎ ಅಂಟಿಕೊಂಡಿದ್ದಾಗ ಆರ್‌ಟಿಐ ಕಾಯ್ದೆಯಡಿ ಅದು ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬ ನೆಪದಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಲು ಪ್ರಧಾನಿ ಕಚೇರಿಯು ಏಕೆ ಪದೇಪದೇ ನಿರಾಕರಿಸುತ್ತಲೇ ಇತ್ತು?, ಪೂರ್ವಾನ್ವಯಿತ ತಿದ್ದುಪಡಿಯನ್ನು ತರುವ ಅಗತ್ಯವೇನಿತ್ತು ಎಂದು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾಗವತ ಪ್ರಶ್ನಿಸಿದ್ದಾರೆ.

ಸಂಪುಟ ಸಚಿವಾಲಯಕ್ಕೆ ತಾನು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಲಭಿಸಿರುವ ಉತ್ತರವು ಪ್ರಧಾನಿ ಪದನಿಮಿತ್ತ ಅಧ್ಯಕ್ಷರಾಗಿರುವ ಮತ್ತು ಮೂವರು ಸಚಿವರು ಪದನಿಮಿತ್ತ ಟ್ರಸ್ಟಿಗಳಾಗಿರುವ ನಿಧಿಯ ಸ್ಥಾಪನೆಯ ನಿರ್ಧಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಿರಲಿಲ್ಲ, ಅಂದರೆ ಸಂಪುಟ ಸಚಿವಾಲಯದ ಅನುಮತಿಯಿಲ್ಲದೆ ನಿಧಿಯು ಸ್ಥಾಪನೆಯಾಗಿದೆ ಎನ್ನುವುದನ್ನು ಬೆಟ್ಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News