×
Ad

ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಸರಿಯಲ್ಲ: ವೈದ್ಯರ ಸಂಘ ಆಕ್ರೋಶ

Update: 2020-08-23 22:18 IST

ಬೆಂಗಳೂರು, ಆ. 23: ಬೇರೆ ಇಲಾಖೆಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ನಮ್ಮ ಇಲಾಖೆ ಕೆಲಸವನ್ನು ನಾವು ನಿರ್ವಹಿಸುತ್ತೇವೆ ಎಂದು ಕರ್ನಾಟಕ ಸರಕಾರಿ ವೈದ್ಯರ ಸಂಘದ ಸದಸ್ಯರು ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಸುದ್ದಿಗೋಷ್ಠಿ ನಡೆಸಿದ ವೈದ್ಯರ ಸಂಘ ಪ್ರತಿನಿಧಿಗಳು, ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರು ಕೆಲಸದ ಒತ್ತಡದ ಹಿನ್ನೆಲೆ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಳೆಯಿಂದ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದಿಂದ ತುರ್ತು ಚಿಕಿತ್ಸೆ ಬಿಟ್ಟು, ಕೋವಿಡ್‍ನ ಯಾವುದೇ ಕೆಲಸ ಮಾಡದಿರಲು ನಿರ್ಧರಿಸುವುದಾಗಿ ಸಿಎಂಗೆ ತಿಳಿಸಿದ್ದೆವು. ಶನಿವಾರ ಸರಕಾರ, ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಮುಷ್ಕರ ಬೇಡ ಎಂದು ಕೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ 31 ಜಿಲ್ಲೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ಜಂಟಿ ನಿರ್ದೇಶಕರು ಸೇರಿದಂತೆ ಹಲವು ಅಧಿಕಾರಿಗಳಿಗೆ ಕೆಲಸ ಹಂಚಿಕೆ ಮಾಡಬೇಕು. ಅವೈಜ್ಞಾನಿಕವಾಗಿ ಸ್ವಾಬ್ ಟೆಸ್ಟ್ ಗೆ ಒತ್ತಾಯ ಮಾಡಬಾರದು. ಗಣೇಶ ಪೆಂಡಲ್, ಮಾರುಕಟ್ಟೆ ಪ್ರದೇಶದಲ್ಲಿ ಜನರ ಸ್ವಾಬ್ ಟೆಸ್ಟ್ ಮಾಡಿಸಿ ಎಂದು ಒತ್ತಾಯ ಮಾಡಬಾರದು ಎನ್ನುವ ವೈದ್ಯರ ಬೇಡಿಕೆಯನ್ನು ಸರಕಾರ ಈಡೇರಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಅಮಾನತು ನಿರ್ಧಾರವನ್ನು ವಾಪಸ್ ಪಡೆದಿರುವ ಸರಕಾರಿ ವೈದ್ಯಾಧಿಕಾರಿಗಳ ಸಂಘ, ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಿದ್ದಾರೆ. ಈಗಾಗಲೇ ಅವರ ಮೇಲೆ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಮಾನತು ಬೇಡಿಕೆಯನ್ನು ಕೈಬಿಟ್ಟಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News