×
Ad

ಎಐಸಿಸಿ ನಾಯಕತ್ವದ ಬಗ್ಗೆ ಅಪಸ್ವರ: ಗಾಂಧಿ ಕುಟುಂಬದ ಬೆನ್ನಿಗೆ ನಿಂತ ರಾಜ್ಯ ಕಾಂಗ್ರೆಸ್

Update: 2020-08-23 22:51 IST
ಫೈಲ್ ಚಿತ್ರ

ಬೆಂಗಳೂರು, ಆ.23: ಎಐಸಿಸಿಯ ನಾಯಕತ್ವದ ಬಗ್ಗೆ ಅಪಸ್ವರ ಎದ್ದಿರುವ ನಡುವೆಯೇ ಕರ್ನಾಟಕ ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. 'ರಾಜ್ಯ ಕಾಂಗ್ರೆಸ್ ಸಂಪೂರ್ಣವಾಗಿ ಸೋನಿಯಾ ಗಾಂಧಿ ಮತ್ತು ಗಾಂಧಿ ಕುಟುಂಬದ ನಾಯಕತ್ವದ ಜೊತೆ ನಿಲ್ಲುತ್ತದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸಂಪೂರ್ಣವಾಗಿ ಸೋನಿಯಾ ಗಾಂಧಿ ಮತ್ತು ಗಾಂಧಿ ಕುಟುಂಬದ ನಾಯಕತ್ವದ ಜೊತೆಗೆ ನಿಲ್ಲುತ್ತದೆ. ಸೋನಿಯಾ ಗಾಂಧಿ ಅವರು ಬಿಕ್ಕಟ್ಟಿನ ಸಮಯದಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸಿದ್ದಾರೆ ಮತ್ತು ನಮ್ಮ ಪಕ್ಷವನ್ನು ಉಳಿಸಿದ್ದಾರೆ. ಚರ್ಚಿಸಬೇಕಾದ ಯಾವುದನ್ನಾದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕೆ ಹೊರತು ಮಾಧ್ಯಮಗಳಲ್ಲಿ ಅಲ್ಲ ಎಂದು ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ''ಶ್ರೀಮತಿ ಸೋನಿಯಾಗಾಂಧಿ ಮತ್ತು ಹಿರಿಯ ನಾಯಕರ ಅನುಭವಪೂರ್ಣ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ‌ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಆಶಯವೂ ಹೌದು" ಎಂದು ತಿಳಿಸಿದ್ದಾರೆ.

ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸಚೈತನ್ಯ, ಕಾರ್ಯಕರ್ತರಲ್ಲಿ ಹುರುಪು ಮತ್ತು ದೇಶದ ಜನತೆಯಲ್ಲಿ ಭರವಸೆ ಮೂಡಲಿದೆ'' ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News