ಗೋವಾಗೆ ಪಿಸಿಐಟಿ ಕಚೇರಿ ಸ್ಥಳಾಂತರಿಸದಂತೆ ಬಸವರಾಜ ಹೊರಟ್ಟಿ ಮನವಿ

Update: 2020-08-23 18:01 GMT

ಹುಬ್ಬಳ್ಳಿ, ಆ.23: ಹುಬ್ಬಳ್ಳಿಯ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿ (ಪಿಸಿಐಟಿ)ಯನ್ನು ಗೋವಾಗೆ ಸ್ಥಳಾಂತರಿಸಲು ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿದ್ದು, ಈ ಕೂಡಲೇ ಆದೇಶವನ್ನು ರದ್ದುಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯ ಪಿಸಿಐಟಿ ಕಚೇರಿಯು ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಡಾವಣಗೆರೆ, ಬಳ್ಳಾರಿ, ಗದಗ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಬಾಗಲಕೋಟ ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ತೆರಿಗೆ ಸಂಬಂಧದ ಅಹವಾಲುಗಳಿಗೆ ಈ ಎಲ್ಲ ಜಿಲ್ಲೆಗಳ ಜನತೆ ಗೋವಾಗೆ ಹೋಗಬೇಕಾಗುತ್ತದೆ. ಹೀಗಾಗಿ, ಕಚೇರಿ ಸ್ಥಳಾಂತರದ ಆದೇಶವನ್ನು ಸರಕಾರ ಹಿಂಪಡೆಯಬೇಕು ಎಂದು ಕೋರಿದ್ದಾರೆ.

ತೆರಿಗೆ ಆದಾಯ ಸಂಗ್ರಹದಲ್ಲಿ ಹೊಸದಿಲ್ಲಿ, ಮಹಾರಾಷ್ಟ್ರ ನಂತರ ಕರ್ನಾಟಕ ಮೂರನೆ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಉದ್ಯಮಿಗಳು ಹಾಗೂ ವೇತನದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಹಾರಾಷ್ಟ್ರದ ಮುಂಬೈ, ನಾಗಪೂರ, ಠಾಣೆ, ನಾಸಿಕ್ ಹಾಗೂ ಪುಣೆಯಲ್ಲಿ ಪಿಸಿಐಟಿ ಕಚೇರಿಗಳು ಇವೆ. ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಬೇರೆಲ್ಲೂ ಇಲ್ಲ. ಹುಬ್ಬಳ್ಳಿ ಮತ್ತು ಮಂಗಳೂರು ಪಿಸಿಐಟಿ ಕಚೇರಿಗಳನ್ನು ಪಣಜಿಗೆ, ಮೈಸೂರು ಹಾಗೂ ಕಲಬುರಗಿ ಕಚೇರಿಗಳನ್ನು ಬೆಂಗಳೂರಿಗೆ ಸೇರಿಸಲಾಗಿದೆ. ಇದು ಕರ್ನಾಟಕಕ್ಕೆ ಆಘಾತ ನೀಡಿದೆ ಎಂದಿದ್ದಾರೆ.

2018-19ರಲ್ಲಿ ಕೇಂದ್ರ ಸರಕಾರಕ್ಕೆ ಕರ್ನಾಟಕದಿಂದ 1,19,796 ಕೋಟಿ ರೂ. ಸಂದಾಯವಾಗಿದೆ. ಹೀಗಿರುವಾಗ ಕರ್ನಾಟಕದ ಜನತೆಗೆ ಅನುಕೂಲ ಮಾಡಿಕೊಡುವ ಬದಲು ಕಚೇರಿಯನ್ನು ಸ್ಥಳಾಂತರ ಮಾಡಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ, ಹುಬ್ಬಳ್ಳಿಯಿಂದ ಆದಾಯ ತೆರಿಗೆ ಪಿಸಿಐಟಿ ಕಚೇರಿಯನ್ನು ಪಣಜಿಗೆ ಸ್ಥಳಾಂತರಿಸಿ ಆದೇಶಿಸಿರುವ ಕ್ರಮವನ್ನು ಕರ್ನಾಟಕ ಜನತೆ ಹಿತದೃಷ್ಟಿಯಿಂದ ಹುಬ್ಬಳ್ಳಿಯಲ್ಲಿಯೇ ಮುಂದುವರೆಸುವಂತೆ ಕ್ರಮ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News