ಕೋವಿಡ್-19 ಸೋಂಕಿಗೆ ​ತುರ್ತು ಸಂದರ್ಭ ಪ್ಲಾಸ್ಮಾ ಚಿಕಿತ್ಸೆ : ಅಮೆರಿಕ ಅನುಮತಿ

Update: 2020-08-24 03:41 GMT

ವಾಷಿಂಗ್ಟನ್ : ಅಮೆರಿಕದಲ್ಲಿ 1.76 ಲಕ್ಷ ಮಂದಿಯನ್ನು ಬಲಿ ತೆಗೆದುಕೊಂಡಿರುವ ಮಾರಕ ಕೋವಿಡ್-19 ಸೋಂಕಿನ ವಿರುದ್ಧದ ಚಿಕಿತ್ಸೆಗೆ ತುರ್ತು ಸಂದರ್ಭದಲ್ಲಿ ಪ್ಲಾಸ್ಮಾ ಬಳಸಲು ಅಮೆರಿಕದ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ಗುಣಮುಖರಾದ ಕೊರೋನ ವೈರಸ್ ರೋಗಿಗಳ ರಕ್ತದ ಪ್ಲಾಸ್ಮಾವನ್ನು ವೈದ್ಯರು ತುರ್ತು ಸಂದರ್ಭದಲ್ಲಿ ಮತ್ತೊಬ್ಬ ರೋಗಿಯ ಚಿಕಿತ್ಸೆಗೆ ಬಳಸಬಹುದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಧ್ವಂಸಗೊಳಿಸಿರುವ ಹಾಗೂ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಎರಡನೇ ಅವಧಿಗೆ ದೇಶದ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಟ್ರಂಪ್ ಅವರ ಮೇಲೆ ಮಾರಕ ಸಾಂಕ್ರಾಮಿಕವನ್ನು ನಿಯಂತ್ರಿಸುವ ಬಲುದೊಡ್ಡ ಸವಾಲು ಇರುವ ಸನ್ನಿವೇಶದಲ್ಲಿ, ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ವಿಭಾಗ ಈ ಆದೇಶ ಹೊರಡಿಸಿದೆ.

ಪ್ಲಾಸ್ಮಾದಲ್ಲಿ ಶಕ್ತಿಶಾಲಿ ಆಂಟಿಬಾಡಿಗಳಿದ್ದು, ಇದು ಸೋಂಕಿತರು ವೇಗವಾಗಿ ಗುಣಮುಖರಾಗಲು ನೆರವಾಗಲಿದೆ ಹಾಗೂ ರೋಗಿಗಳ ಸ್ಥಿತಿ ಗಂಭೀರವಾಗುವುದನ್ನು ತಡೆಯುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಪ್ಲಾಸ್ಮಾ ಕೋವಿಡ್-19 ಚಿಕಿತ್ಸೆಯಲ್ಲಿ ಪರಿಣಾಮಕಾರಿ, ಇದರ ಸಂಭಾವ್ಯ ಪ್ರಯೋಜನಗಳನ್ನು ಮತ್ತು ಅಪಾಯ ಸಾಧ್ಯತೆಯನ್ನು ಅಂದಾಜಿಸಲಾಗಿದೆ ಎಂದು ಎಫ್‌ಡಿಎ ಹೇಳಿಕೆ ನೀಡಿದೆ.

ಈ ಚಿಕಿತ್ಸಾ ವಿಧಾನವನ್ನು ಹಲವು ದೇಶಗಳಲ್ಲಿ ಅನುಸರಿಸಲಾಗುತ್ತಿದ್ದರೂ, ಇದರ ಪರಿಣಾಮದ ಬಗ್ಗೆ ತಜ್ಞರ ಮಟ್ಟದಲ್ಲಿ ಇನ್ನೂ ಚರ್ಚೆ ಮುಂದುವರಿದಿದೆ. ಇದರ ಅಡ್ಡಪರಿಣಾಮಗಳ ಬಗ್ಗೆ ಹಲವು ಮಂದಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News