ಲಾಕ್‍ಡೌನ್ ತೆರವಾದ ಬಳಿಕವೂ ಚೇತರಿಸಿಕೊಳ್ಳದ ಜವಳಿ ಉದ್ಯಮ

Update: 2020-08-24 13:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.24: ಎಲ್ಲೆಡೆ ಲಾಕ್‍ಡೌನ್ ತೆರವಾದ ಬಳಿಕ ಜನಜೀವನ ಸಹಜಸ್ಥಿತಿಗೆ ಮರಳಿದ್ದು, ವಾಣಿಜ್ಯ ವಹಿವಾಟು ಸಹಜಸ್ಥಿತಿಗೆ ಮರಳುತ್ತಿದೆ. ಆದರೆ, ಜವಳಿ ಕ್ಷೇತ್ರ ಇನ್ನೂ ಚೇತರಿಸಿಕೊಂಡಿಲ್ಲ.

ಅನ್‍ಲಾಕ್ ನಂತರ ಮದುವೆ, ಹಬ್ಬದ ಕಾರ್ಯಕ್ರಮಗಳಿಗೆ ಅವಕಾಶ ಇದ್ದರೂ, ಅವುಗಳು ಮನೆಗಳಿಗೆ ಸೀಮಿತವಾಗಿವೆ. ಈ ಮಧ್ಯೆ ಮದುವೆ ಸೀಝನ್ ಮುಗಿದು, ಮಳೆಗಾಲ ಬಂದಿದೆ. ಪರಿಣಾಮ ಯಾವುದೇ ವ್ಯತ್ಯಾಸ ಆಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ. ಹೀಗಾಗಿ, ಶುಭ ಸಮಾರಂಭಗಳೇ ಇಲ್ಲದಿದ್ದರೆ ಜವಳಿ ವ್ಯಾಪಾರ ಅಷ್ಟಕಷ್ಟೇ. ಇದು ಜವಳಿ ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.

ಬಟ್ಟೆಗಳನ್ನು ಹೊಲಿದು ಜೀವನ ನಡೆಸುವ ಟೈಲರ್ ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಇಲ್ಲ. ಇತ್ತ ಅಂಗಡಿಕಾರರು ಗ್ರಾಹಕರನ್ನು ಅಂಗಡಿಗಳತ್ತ ತೆಗೆಯಲು ಹೊಸ ಹೊಸ ತಂತ್ರಜ್ಞಾನ ಬಳಸುತ್ತಿದ್ದಾರೆ. ಆನ್‍ಲೈನ್ ಮತ್ತು ಜಾಲತಾಣಗಳ ಮೂಲಕ ರಿಯಾಯಿತಿ ಆಫರ್ ನೀಡುತ್ತಿದ್ದಾರೆ. ಆದರೆ, ಗ್ರಾಹಕರು ಗುಣಮಟ್ಟದ ಬಟ್ಟೆಗಳನ್ನು ಕೈಬಿಟ್ಟು ಆನ್‍ಲೈನ್‍ನಂತಹ ಮೋಸದ ಜಾಲದ ಬಲೆಗೆ ಬೀಳುತ್ತಿದ್ದಾರೆ. ಹೀಗಾಗಿ, ಬಟ್ಟೆ ಅಂಗಡಿಗಳು ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿವೆ ಎಂದು ಜವಳಿ ಉದ್ಯಮಿಗಳು ಹೇಳಿದ್ದಾರೆ.

ಕೊರೋನ ಬರುವುದಕ್ಕೂ ಮುನ್ನ ವಹಿವಾಟಿಗೂ ಈಗಿನ ವಹಿವಾಟಿಗೂ ತುಂಬಾ ವ್ಯತ್ಯಾಸ ಕಂಡು ಬಂದಿದೆ. ಬಳ್ಳಾರಿಯಲ್ಲಿ ಶೇಕಡಾ 50 ರಷ್ಟು, ದಾವಣಗೆರೆಯಲ್ಲಿ ಶೇ.75 ರಷ್ಟು ವ್ಯಾಪಾರ ವಹಿವಾಟು ಕುಸಿದಿದೆ ಎನ್ನಲಾಗುತ್ತಿದೆ. ಹೀಗೆ ಮುಂದುವರೆದರೆ ನಮ್ಮ ಸ್ಥಿತಿ ಮತ್ತಷ್ಟು ಘೋರವಾಗಿರಲಿದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News