×
Ad

ಕಾಂಗ್ರೆಸ್ ನಾಯಕತ್ವ ರಾಹುಲ್ ಗಾಂಧಿಗೆ ವಹಿಸುವಂತೆ ಸೋನಿಯಾಗೆ ಸಿದ್ದರಾಮಯ್ಯ ಮನವಿ

Update: 2020-08-24 20:12 IST

ಬೆಂಗಳೂರು, ಆ.24: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ತಾವೇ ಮುಂದುವರಿಯಬೇಕು ಎಂದು ಕಳಕಳಿಯ ಮನವಿ. ಒಂದು ವೇಳೆ ನಿಮ್ಮ ಆರೋಗ್ಯ ಈ ಜವಾಬ್ದಾರಿಯನ್ನು ನಿರ್ವಹಿಸಲು ಅವಕಾಶ ಕಲ್ಪಿಸದಿದ್ದರೆ, ರಾಹುಲ್‍ ಗಾಂಧಿಯನ್ನು ಪಕ್ಷದ ಸಾರಥ್ಯ ವಹಿಸಿಕೊಳ್ಳುವಂತೆ ಮನವೊಲಿಸಿ ಎಂದು ಸೋನಿಯಾಗಾಂಧಿಗೆ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಸಂಬಂಧ ಸೋನಿಯಾಗಾಂಧಿಗೆ ಪತ್ರ ಬರೆದಿರುವ ಅವರು, ಕಾಂಗ್ರೆಸ್ ಪಕ್ಷ ಇದೇ ಮೊದಲ ಬಾರಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ. ಪ್ರತಿಬಾರಿಯೂ ಪಕ್ಷ ಸಂಕಷ್ಟದಿಂದ ಹೊರಹೊಮ್ಮಿದೆ. ಕಠಿಣ ಪರಿಸ್ಥಿತಿಯಲ್ಲಿ ಗಾಂಧಿ ಕುಟುಂಬವೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿರುವುದನ್ನು ನಾವು ಮರೆಯಬಾರದು. ಅವರ ಕೊಡುಗೆಯನ್ನು ಪ್ರತಿಯೊಬ್ಬ ಭಾರತೀಯ ಹಾಗೂ ಕಾಂಗ್ರೆಸ್ಸಿಗನು ಸ್ಮರಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

1977ರಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾ ಗಾಂಧಿ ಸೋತಾಗಲೂ ಗಾಂಧಿ ಕುಟುಂಬವನ್ನು ಗುರಿಯನ್ನಾಗಿಸಲಾಗಿತ್ತು. ಆದರೆ, ಇಂದಿರಾ ಗಾಂಧಿ ಇದನ್ನು ಸವಾಲಾಗಿ ಸ್ವೀಕರಿಸಿ, ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದರು. ದೂರದೃಷ್ಟಿಯ ನಾಯಕ ರಾಜೀವ್ ಗಾಂಧಿ ನಿಧನದ ನಂತರ ಪಕ್ಷದಲ್ಲಿ ನಾಯಕತ್ವದ ಕೊರತೆ ಉಂಟಾಗಿತ್ತು. ಇಂತಹ ಕಠಿಣ ಸಂದರ್ಭದಲ್ಲಿ ತಾವು ತಮ್ಮ ನೋವನ್ನು ಬದಿಗಿಟ್ಟು, ತಮ್ಮ ಮಕ್ಕಳ ಪೋಷಣೆಯ ಜೊತೆಗೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೀರಾ. 1998-2004ರ ನಡುವೆ ನೀವು ಪಕ್ಷವನ್ನು ಮುನ್ನಡೆಸಲು ಎದುರಿಸಿದ ಸಂಕಷ್ಟಗಳ ಬಗ್ಗೆ ನಮಗೆ ಅರಿವಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಮೇಲೆ ಯಾರಿಗೂ ನಂಬಿಕೆ ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ನೀವು 2004ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೀರಿ. ಪ್ರಧಾನಿಯಾಗಲು ಇದ್ದ ಅವಕಾಶವನ್ನು ತಾವು ತ್ಯಾಗ ಮಾಡಿದ್ದೀರಿ. 1977 ಹಾಗೂ 1998ರಲ್ಲಿ ಇದ್ದಂತಹ ಪರಿಸ್ಥಿತಿಯನ್ನೆ ಕಾಂಗ್ರೆಸ್ ಇವತ್ತು ಎದುರಿಸುತ್ತಿದೆ. ಕೇವಲ ನಮ್ಮ ಪಕ್ಷವಷ್ಟೇ ಅಲ್ಲ, ಇಡೀ ದೇಶ ಇವತ್ತು ಸಂಕಷ್ಟದಲ್ಲಿದೆ. ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪ್ರಜಾಪ್ರಭುತ್ವದ ಆಧಾರಸ್ತಂಭಗಳ ಮೇಲೆ ಬಿಜೆಪಿಯಿಂದ ನಿರಂತರವಾಗಿ ದಾಳಿಯಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಂವಿಧಾನದ ಮೌಲ್ಯಗಳು ಹಾಗೂ ದೇಶದ ಧ್ವನಿಯನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದಂತಹ ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ. ದೇಶವನ್ನು ಸುಸ್ಥಿತಿಗೆ ತರಲು ಒಂದು ರಾಜಕೀಯ ಪಕ್ಷವಾಗಿ ನಾವು ಶ್ರಮಿಸಬೇಕಿದೆ. ಅದಕ್ಕಾಗಿ ಗಾಂಧಿ ಕುಟುಂಬ ಪಕ್ಷವನ್ನು ಮುನ್ನಡೆಸುವ ಅಗತ್ಯವಿದೆ ಎಂಬುದು ಎಲ್ಲ ನಾಯಕರು, ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದುದರಿಂದ, ತಾವು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಕಳಕಳಿಯ ಮನವಿ ಮಾಡುತ್ತೇನೆ. ಒಂದು ವೇಳೆ ನಿಮ್ಮ ಆರೋಗ್ಯ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವಕಾಶ ಕಲ್ಪಿಸದಿದ್ದರೆ, ರಾಹುಲ್ ಗಾಂಧಿಯನ್ನು ಪಕ್ಷದ ಸಾರಥ್ಯವಹಿಸಿಕೊಳ್ಳುವಂತೆ ಮನವೊಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News