×
Ad

ಪುಸ್ತಕ ಆಯ್ಕೆ ಸಮಿತಿಯಲ್ಲಿ ಮಹಿಳೆಯರಿಗೆ ಸಿಗದ ಪ್ರಾತಿನಿಧ್ಯ: ಲೇಖಕಿಯರ ಅಸಮಾಧಾನ

Update: 2020-08-24 20:17 IST

ಬೆಂಗಳೂರು, ಆ.24: ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕ ಆಯ್ಕೆಗಾಗಿ ಇರುವ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್‍ರಚಿಸಲಾಗಿದ್ದು, ಈ ಸಮಿತಿಯಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸದೇ ಇರುವುದು ಲೇಖಕಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಯಾವುದೇ ಸರಕಾರ ಯಾವುದೇ ಸಮಿತಿಗಳನ್ನು ರಚನೆ ಮಾಡಿದರೂ ಮಹಿಳೆಯರಿಗೆ ಅವಕಾಶ ನೀಡಬೇಕು. ಈ ಹಿಂದೆ ನಾನು ಕೂಡ ಈ ಸಮಿತಿಯ ಅಧ್ಯಕ್ಷೆ ಆಗಿದ್ದೆ ಆಗಲೂ ಕೂಡ ಮಹಿಳೆಯರಿದ್ದರು. ಈಗ ಆ ಸಮಿತಿಯಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸದೇ ಇರುವುದು ಎಷ್ಟು ಸರಿ ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಪ್ರಶ್ನಿಸಿದ್ದಾರೆ.

ಈಗಾಗಲೇ ಕನ್ನಡ ಸಾಹಿತ್ಯ ವಲಯದಲ್ಲಿ ಹಲವು ಮಹಿಳಾ ಪ್ರಕಾಶಕಿಯರು ಇದ್ದಾರೆ. ಅವರನ್ನು ಗುರುತಿಸಿ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆ ಮಾಡುವ ಕಾರ್ಯ ನಡೆಯಬೇಕಾಗಿತ್ತು. ಮಹಿಳೆಯರು ಕೂಡ ಪುರುಷರಷ್ಟೇ ಸಮರ್ಥರಾಗಿದ್ದಾರೆ. ಅವರ ಸಾಮರ್ಥ್ಯವನ್ನು ಏಕೆ ಕುಂದುಗೊಳಿಸುತ್ತಿರಿ, ಮಹಿಳಾ ವಲಯದಲ್ಲೂ ವಿಮರ್ಶಕಿಯರು, ಸಂಶೋಧಕಿಯರಿದ್ದಾರೆ ಎಂದ ಅವರು, ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಇಲ್ಲಿ ಲಿಂಗ ಅಸಮಾನತೆ ಎದ್ದುಕಾಣುತ್ತದೆ. ಇದನ್ನು ಖಂಡಿಸುತ್ತೇನೆ. ಸಾಮಾಜಿಕ ನ್ಯಾಯದ ಜತೆಗೆ ಲಿಂಗ ಸಮಾನತೆಯಿಲ್ಲ. ಇದನ್ನು ಸರಕಾರ ಸರಿಪಡಿಸಬೇಕು. ಶೇ.33 ರಷ್ಟು ಮಹಿಳಾ ಪ್ರಾತಿನಿಧ್ಯ ಇರಬೇಕು ಎಂದಿದ್ದಾರೆ.

ಕರ್ನಾಟ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್ ಪ್ರತಿಕ್ರಿಯಿಸಿ, ಮಹಿಳೆಯರು ಆಯ್ಕೆಯಾಗಿದ್ದರೆ ಭಿನ್ನದೃಷ್ಟಿಕೋನದ ಪುಸ್ತಕಗಳನ್ನು ಆಯ್ಕೆ ಮಾಡುತ್ತಿದ್ದರು. ಪುಸ್ತಕ ಆಯ್ಕೆ ಸಮಿತಿಗೆ ಮಹಿಳೆಯರನ್ನು ಕೈಬಿಟ್ಟಿರುವುದು ಸರಿಯಾದ ನಿರ್ಧಾರವಲ್ಲ ಎಂದು ಹೇಳಿದ್ದಾರೆ.

ಇವತ್ತಿಗೂ ಮಹಿಳಾ ಅಭಿವ್ಯಕ್ತಿಗೆ ಸರಿಯಾದ ಪ್ರಾತಿನಿಧ್ಯ ಇಲ್ಲದೆ ಇರುವಾಗ. ಒಬ್ಬ ಮಹಿಳೆ ಇಂತಹ ಆಯ್ಕೆ ಸಮಿತಿಯಲ್ಲಿ ಇದ್ದರೆ ನ್ಯಾಯ ಸಿಗಲಿದೆ ಎಂಬುವುದು ನನ್ನ ಭಾವನೆ ಎಂದು ವಿಮರ್ಶಕಿ ಎಂ.ಎಸ್.ಆಶಾದೇವಿ ತಿಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News