×
Ad

ಮೈಸೂರು: ಸಿಇಒ ವರ್ಗಾವಣೆ ರದ್ದುಗೊಳಿಸಲು ಒತ್ತಾಯಿಸಿ ಪ್ರಾದೇಶಿಕ ಆಯುಕ್ತರಿಗೆ ಪಿಡಿಒಗಳ ಮನವಿ

Update: 2020-08-24 22:17 IST

ಮೈಸೂರು,ಆ.24: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದವರು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ಸೋಮವಾರ ತೆರಳಿದ ನೂರಾರು ಸಂಖ್ಯೆಯ ಪಿಡಿಓಗಳು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಗೆ ಮನವಿ ಪತ್ರ ಸಲ್ಲಿಸಿದರು.

ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮೇಲೆ ಆರೋಪ ಹೊರಿಸಿರುವುದನ್ನು ಖಂಡಿಸಿದ ಪಿಡಿಓಗಳು, ತನಿಖೆಯ ವರದಿ ಬರುವ ಮೊದಲೇ ಮಿಶ್ರಾ ಅವರನ್ನು ವರ್ಗಾವಣೆಗೊಳಿಸಿ ಹೊರಡಿಸಿರುವ ಆದೇಶವನ್ನು ರದ್ದು ಪಡಿಸಬೇಕು. ದೂರಿನಲ್ಲಿ ಮಿಶ್ರಾ ಅವರ ಹೆಸರನ್ನು ಮಾತ್ರ ಸೇರಿಸಲಾಗಿದೆ. ಇದರಲ್ಲಿ ಹುನ್ನಾರವಿದೆ. ಮಿಶ್ರಾ ಅವರ ಮೇಲಿನ ಎಫ್ಐಆರ್ ಅನ್ನು ರದ್ದು ಪಡಿಸಬೇಕು. ಮಿಶ್ರಾ ಅವರನ್ನು ನಿಂದಿಸಿದ ಡಾ.ರವೀಂದ್ರ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪಿಡಿಓಗಳು ಬೃಹತ್ ಪ್ರತಿಭಟನಾ ಜಾಥಾಗೆ ಪೊಲೀಸ್ ಇಲಾಖೆಯಿಂದ ಅನುಮತಿ ಕೋರಿದ್ದರು. ಪೊಲೀಸ್ ಇಲಾಖೆ ಜಾಥಾಗೆ ಅನುಮತಿ ನಿರಾಕರಿಸಿತ್ತು. ಆರು ಮಂದಿ ಪಿಡಿಓಗಳಿಗೆ ಮಾತ್ರ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲು ಅನುಮತಿ ನೀಡಲಾಗಿತ್ತು. ಆದರೆ ನೂರಾರು ಸಂಖ್ಯೆಯಲ್ಲಿ ಪಿಡಿಓಗಳು ಪ್ರಾದೇಶಿಕ ಆಯುಕ್ತರ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ಪಿಡಿಓಗಳು ಸಾಮೂಹಿಕ ರಜೆ ಹಾಕಿ ಕಪ್ಪು ಪಟ್ಟಿ ಧರಿಸಿ ಹೋರಾಟದಲ್ಲಿ ಭಾಗಿಯಾಗಿದ್ದರು. ಇವರಿಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಬೆಂಬಲ ವ್ಯಕ್ತಪಡಿಸಿದ್ದು, ಅವರು ಸಹ ಸಾಮೂಹಿಕ ರಜೆ ಹಾಕಿ ಮನವಿ ಪತ್ರ ಸಲ್ಲಿಸಲು ಆಗಮಿಸಿದ್ದರು.

ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ಮಾಯಪ್ಪ, ಖಜಾಂಚಿ ಎನ್.ಚಂದ್ರಕಾಂತ್, ಕೆ.ಎಸ್.ಸತೀಶ್ ಕುಮಾರ್, ಎಂ.ವೃಷಬೇಂದ್ರ, ಜಿ.ಎಸ್.ಶಿಲ್ಪ, ಎಸ್.ಮಧುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News