×
Ad

ಅತಿವೃಷ್ಟಿಗೆ ಹೆಚ್ಚಿನ ಪರಿಹಾರ ಕೋರಲು ಮುಂದಿನ ವಾರ ದಿಲ್ಲಿಗೆ: ಸಿಎಂ ಯಡಿಯೂರಪ್ಪ

Update: 2020-08-25 17:25 IST

ಬೆಳಗಾವಿ, ಆ.25: ಶೀಘ್ರ ಎಲ್ಲ ಶಾಸಕರ ಸಭೆ ಕರೆದು ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡಲು ಯೋಜನೆ ರೂಪಿಸಲಾಗುವುದು. ಎಲ್ಲ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು. ಮುಂದಿನ ವಾರ ದಿಲ್ಲಿಗೆ ಹೋಗಿ ಹಚ್ಚಿನ ಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಅತಿವೃಷ್ಟಿಗೆ ಸಂಬಂಧಿಸಿದಂತೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕೋವಿಡ್-19 ಇರುವುದರಿಂದ ಎನ್.ಡಿ.ಆರ್.ಎಫ್. ಅನುದಾನದಡಿ ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರಕಾರಕ್ಕೆ ಕಳುಹಿಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹ ನಿರ್ವಹಣೆ ಮತ್ತಿತರ ತುರ್ತು ಕೆಲಸಕ್ಕೆ ಬೆಳಗಾವಿ ಜಿಲ್ಲೆಯಲ್ಲಿ 412 ಕೋಟಿ ರೂಪಾಯಿ ಅನುದಾನ ಲಭ್ಯವಿದೆ. ಹೆಚ್ಚಿನ ಹಣ ಬೇಕಾದರೆ ತಕ್ಷಣವೇ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ 174 ಕೋಟಿ ರೂಪಾಯಿ ಇದೆ. ಇದಲ್ಲದೇ ಉಳಿದಿರುವ ಅನುದಾನದಲ್ಲಿ ರಸ್ತೆ ದುರಸ್ತಿ ಮತ್ತಿತರ ಕಾಮಗಾರಿ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಇದೇ ರೀತಿ ಇತರೆ ಜಿಲ್ಲೆಗಳಲ್ಲಿ ಸಾಕಷ್ಟು ಹಣ ಲಭ್ಯವಿದೆ. ಮನೆ ಕಳೆದುಕೊಂಡಿರುವ ಬೆಳಗಾವಿಯ 44,156 ಫಲಾನುಭವಿಗಳಿಗೆ 488 ಕೋಟಿ ರೂ.ಪರಿಹಾರ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ತಿಳಿಸಿದರು.

ಬೆಳಗಾವಿ-ಧಾರವಾಡ ಜಿಲ್ಲೆಗಳ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಮನೆ ಹಾಗೂ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಕಂದಾಯ ಸಚಿವರಾದ ಆರ್.ಅಶೋಕ್, ಕಳೆದ ವರ್ಷದ ಮನೆಪರಿಹಾರ ನೀಡುವ ತಂತ್ರಾಂಶ ಪುನಃ ಆರಂಭಿಸುವ ಕುರಿತು ಸರಕಾರದ ಮಟ್ಟದಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರವಾಹ ನಿರ್ವಹಣೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು.

ಸಭೆಯಲ್ಲಿ ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಅಭಯ್ ಪಾಟೀಲ್, ಮಹೇಶ್ ಕುಮಠಳ್ಳಿ, ಲಕ್ಷ್ಮೀ ಹೆಬ್ಬಾಳ್ಕರ್, ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ ತಮ್ಮ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದರು.

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ್, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ್, ದುರ್ಯೋಧನ ಐಹೊಳೆ, ಉಮೇಶ್ ಕತ್ತಿ, ಮಹಾಂತೇಶ ಕೌಜಲಗಿ, ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಎಲ್.ಅತೀಕ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News