ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಯುವ ವಕೀಲ
ಬಳ್ಳಾರಿ, ಆ.25: ಬ್ಯಾಂಕ್‍ನಲ್ಲಿ ಕಾನೂನು ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಸೆಲ್ಫೀ ವಿಡಿಯೋ ಮಾಡಿಟ್ಟು ಬ್ಯಾಂಕ್‍ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆಯ ಬಳ್ಳಾರಿ ಸರ್ಕಲ್ ಬಳಿ ಇರುವ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉದ್ಯೋಗಿ ಮಹೇಶ್(28) ಆತ್ಮಹತ್ಯೆಗೆ ಶರಣಾದ ಯುವಕ. ಬ್ಯಾಂಕ್‍ನಲ್ಲಿ ಕಾನೂನು ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದ ಮಹೇಶ್, ಬ್ಯಾಂಕ್‍ನಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ವಿರೋಧ ಮಾಡಿದ ಹಿನ್ನೆಲೆ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಬ್ಯಾಂಕ್‍ನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಸಾಲ ನೀಡುತ್ತಿದ್ದು, ಇದನ್ನು ವಿರೋಧ ಮಾಡಿದ ಹಿನ್ನೆಲೆ ಮೇಲಿನ ಅಧಿಕಾರಿಗಳು ತಾವು ಹೇಳಿದ ಕೆಲಸ ಮಾಡುವಂತೆ ಬಾಯಿಗೆ ಬಂದ ಹಾಗೆ ಬೈದಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಹೇಶ್ ಡೆತ್‍ನೋಟ್ ಬರೆದಿಟ್ಟಿದ್ದಾರೆ.
ಬ್ಯಾಂಕ್‍ನ ಸ್ಟೇಟ್ ಬಿಸಿನೆಸ್ ಹೆಡ್ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಮಹೇಶ್, ಮುಖ್ಯಸ್ಥ ತನಗೆ ನಕಲಿ ದಾಖಲೆಯನ್ನು ಅಸಲಿ ಎಂದು ಹೇಳುವಂತೆ ನಿರಂತರ ಒತ್ತಡ ಹೇರುತ್ತಿದ್ದರು. ನಕಲಿ ದಾಖಲೆ ಹೊಂದಿದವರಿಗೆ ಬ್ಯಾಂಕ್ ಸಾಲ ನೀಡುವಂತೆ ಒತ್ತಡ ಹೇರುತ್ತಿದ್ದರು. ಬಳ್ಳಾರಿಯ ಬ್ರಾಂಚ್‍ನಿಂದ ಹಲವಾರು ಖಾತೆದಾರರು ನೀಡಿದ ದಾಖಲೆ ನಕಲಿಯಾಗಿತ್ತು. ದಾಖಲೆಯನ್ನು ಪರಿಶೀಲನೆ ಮಾಡಲು ಬಳ್ಳಾರಿ ಮಹಾನಗರ ಪಾಲಿಕೆಗೆ ಬಂದಾಗ ನಕಲಿ ಎಂಬುದು ಬಹಿರಂಗವಾದವು. ನಕಲಿ ದಾಖಲೆಯನ್ನು ಅಸಲಿ ಎಂದು ಸರ್ಟಿಫೈ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.