ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಲು ಒತ್ತಾಯ: ಆ.28ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ
ಕಲಬುರಗಿ, ಆ.25: ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಆ.28ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಳವಾರ, ಪರಿವಾರ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಸರದಾರ ರಾಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಮಾ.20ರಂದು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಿದೆ. ಅದರಂತೆ ರಾಜ್ಯ ಸರಕಾರವು ಈ ಎರಡು ಸಮುದಾಯವನ್ನು ಪ್ರವರ್ಗ-1ರಿಂದ ತೆಗೆದು ಹಾಕಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಜೂ.5ರಂದು ಆದೇಶ ಹೊರಡಿಸಿದೆ. ಆದರೆ, ನಾಯಕ ಸಮುದಾಯದ ಜನಪ್ರತಿನಿಧಿ ಹಾಗೂ ಮಠಾಧೀಶರ ಒತ್ತಡಕ್ಕೆ ಮಣಿದು ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಲಾಗುತ್ತಿಲ್ಲವೆಂದು ಆರೋಪಿಸಿದ್ದಾರೆ.
ಕೇಂದ್ರ ಸರಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದರೂ ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡದಿರುವುದು ರಾಜಕೀಯ ಹಸ್ತಕ್ಷೇಪ ಹಾಗೂ ನಾಯಕ ಸಮುದಾಯದ ರಾಜಕಾರಣಿಗಳು, ಮಠಾಧೀಶರು, ಅಧಿಕಾರಿಗಳ ಮತ್ತು ಸಂಘಟನೆಗಳ ತೋಳ್ಬಲ, ಹಣಬಲಕ್ಕೆ ರಾಜ್ಯ ಸರಕಾರ ಹಾಗೂ ಅಧಿಕಾರಿಗಳು ಭಯ ಪಡುತ್ತಿದ್ದಾರೆ. ಇದರಿಂದಾಗಿ ನೂರಾರು ವರ್ಷಗಳಿಂದ ಅವಕಾಶ ವಂಚಿತ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ.
ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಟ್ಟಿರುವ ಅದರ 39ಪರ್ಯಾಯ ಪದಗಳಲ್ಲಿ ತಳವಾರ ಪದವಿಲ್ಲ. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಲ್ಲಾಗಲಿ, ರಾಜ್ಯ ಬುಡಕಟ್ಟು ಅಧ್ಯಯನ ವಿಭಾಗದವರು ಕೊಟ್ಟ ಕೋಲಿ ಸಮಾಜದ ಪದಗಳ ಪಟ್ಟಿಯಲ್ಲಿಯೂ ತಳವಾರ ಜಾತಿ ಪದವಿಲ್ಲ. ಇದು ಅನ್ಯಾಯವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಪಕ್ಷದ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕೆಂದು ಆಗ್ರಹಿಸಿ ಆ.28ರಂದು ಅನಿರ್ದಿಷ್ಟಾವಧಿ ಧರಣಿ ನಡೆಸಲು ಉದ್ದೇಶಿಸಿದ್ದೇವೆಂದು ಅವರು ಹೇಳಿದರು.