ರಾಯಣ್ಣ ಪ್ರತಿಮೆ ತೆರವಿಗೆ ವಿರೋಧ: ತುಮಕೂರು ಡಿಸಿ ಕಚೇರಿ ಎದುರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Update: 2020-08-25 13:43 GMT

ತುಮಕೂರು,ಆ.25: ಬೆಳಗಾವಿಯ ಅಳಕವಾಡಿಯಲ್ಲಿ ಸ್ಥಾಪಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ತೆರವುಗೊಳಿಸಿರುವ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ, ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ, ರೈತಪರ ಸಂಘಟನೆ, ಅಂಬೇಡ್ಕರ್ ಯುವಸೇನೆ, ದಸಂಸ, ಕರ್ನಾಟಕ ರಕ್ಷಣಾ ಸೇನೆ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಜಿಲ್ಲಾಧ್ಯಕ್ಷ ಎನ್.ಅರುಣ್‍ ಕುಮಾರ್, ಇತ್ತೀಚೆಗಷ್ಟೇ ಬೆಳಗಾವಿಯ ಅಳಕವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ಆದರೆ ಅಲ್ಲಿನ ಜಿಲ್ಲಾಡಳಿತ ಪುತ್ಥಳಿಯನ್ನು ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧ. ಇದು ರಾಜ್ಯದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರರಾದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರಿಗೆ ಮಾಡಿದ ಅಪಮಾನವಾಗಿದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಯಾವ ಸ್ಥಳದಲ್ಲಿ ಮೂರ್ತಿಯನ್ನು ಸ್ಥಾಪಿಸಲಾಗಿತ್ತೋ ಅದೇ ಸ್ಥಳದಲ್ಲಿ ಮೂರ್ತಿಯನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಇದನ್ನು ನಿರಾಕರಿಸಿದರೆ ರಾಜ್ಯಾದ್ಯಂತ ಕರವೇ ಯುವಸೇನೆ, ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ರೈತಪರ ಸಂಘಟನೆಯ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ಮಾತನಾಡಿ, ಶಾಂತಿ, ಸೌಹಾರ್ಧತೆಗೆ ಹೆಸರುವಾಸಿಯಾದ ನಮ್ಮ ರಾಜ್ಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಯನ್ನು ತೆರವುಗೊಳಿಸಿ ಇಡೀ ಕನ್ನಡ ನಾಡಿನ ಸ್ವಾತಂತ್ರ ಹೋರಾಟಗಾರರಿಗೆ ಮಾಡಿದ ಅವಮಾನ. ಕೂಡಲೇ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತು ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಯನ್ನು ಅದೇ ಸ್ಥಳದಲ್ಲಿ ಮರು ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ನಟರಾಜ್, ಗಣೇಶ್ ಜಿ., ಪಿ.ಎನ್.ರಾಮಯ್ಯ, ಚೇತನ್, ಎಚ್.ರಾಮೇಗೌಡ, ಕೆಂಪೇಗೌಡ, ವಿಜಯಕುಮಾರ್, ಸಿದ್ದೀಕ್ ಖಾನ್, ವಿನೋದ್‍ ಕುಮಾರ್, ಗೌಸ್‍ಪಾಷ, ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News