×
Ad

ಎಲ್ಲ ಸೆಮಿಸ್ಟರ್ ಗಳಿಗೂ ಪರೀಕ್ಷೆ ನಡೆಸುವ ರಾಜ್ಯ ಕಾನೂನು ವಿವಿ ಕ್ರಮ ಸರಿಯಲ್ಲ: ಎಸ್‍ಐಒ

Update: 2020-08-25 20:17 IST

ಬೆಂಗಳೂರು, ಆ.25: ಅಂತಿಮ ಸೆಮಿಸ್ಟರ್ ಹೊರತುಪಡಿಸಿ ಉಳಿದ ಸೆಮಿಸ್ಟರ್ ಗಳಿಗೆ ಪರೀಕ್ಷೆ ನಡೆಸಬಾರದೆಂದು ಸರಕಾರದ ಆದೇಶ ಇದ್ದರೂ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಮ ಸರಿಯಲ್ಲವೆಂದು ಎಸ್‍ಐಒ ಅಭಿಪ್ರಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್‍ಐಒ, ಕೊರೋನ ಸೋಂಕಿನಿಂದಾಗಿ ಬೋಧನಾ ತರಗತಿಗಳು ನಡೆದಿಲ್ಲ. ಹಾಗೂ ಅರ್ಧದಷ್ಟು ಪಠ್ಯಕ್ರಮವೇ ಪೂರ್ಣಗೊಂಡಿಲ್ಲ. ಹೀಗಾಗಿ ಕಾನೂನು ವಿಶ್ವವಿದ್ಯಾಲಯವು ಎಲ್ಲ ಸೆಮಿಸ್ಟರ್‍ಗಳಿಗೂ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ತನ್ನ ಕ್ರಮವನ್ನು ಹಿಂಪಡೆದು ವಿದ್ಯಾರ್ಥಿಗಳ ಹಿತ ಕಾಯಬೇಕೆಂದು ಆಗ್ರಹಿಸಿದೆ.

ಹೊರ ರಾಜ್ಯ ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಇಲ್ಲ. ಹಾಸ್ಟೆಲ್‍ಗಳನ್ನು ಕೋವಿಡ್ ಕೇಂದ್ರಗಳಾಗಿ ಬಳಸಲಾಗುತ್ತಿದೆ. ಇದರ ನಡುವೆಯು ಎಲ್ಲ ಸೆಮಿಸ್ಟರ್‍ಗಳಿಗೆ ಪರೀಕ್ಷಾ ದಿನಾಂಕ ಪ್ರಕಟಿಸಿ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸುವುದು ಖಂಡನಾರ್ಹವಾಗಿದೆ.

ವಿದ್ಯಾರ್ಥಿಗಳ ಜೀವಕ್ಕಿಂತ ಪರೀಕ್ಷೆ ದೊಡ್ಡದಲ್ಲ. ಆದರೂ ಯುಜಿಸಿ ಸೂಚಿಸಿರುವ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಿ ಪರೀಕ್ಷೆ ಮಾಡಲು ಹೊರಟಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಕೂಡಲೇ ಕಾನೂನು ವಿಶ್ವವಿದ್ಯಾಲಯ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಎಸ್‍ಐಒ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಫೀರ ಲಟಗೇರಿ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News